ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯವಾಗಿ ಹರಡುತ್ತಿದೆ ಮತ್ತು ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಮೆಟ್ರೋ ಸಿಟಿಗಳಲ್ಲಿ ಹೆಚ್ಚು ಪ್ರಬಲವಾಗ್ತಿದೆ ಎಂದು INSACOG ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ಒಮಿಕ್ರಾನ್ ನ ಉಪ-ವೇರಿಯಂಟ್ BA.2 ವಂಶಾವಳಿಯು ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಒಮಿಕ್ರಾನ್ ಸಮುದಾಯ ಪ್ರಸರಣದ ಹಂತದಲ್ಲಿರುವುದರಿಂದ, BA.2 ವಂಶಾವಳಿಯು ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿದೆ. ಜೊತೆಗೆ S-gene ಡ್ರಾಪ್ಔಟ್ ವೇರಿಯಂಟ್ ಬಗ್ಗೆ ಸಧ್ಯಕ್ಕೆ ನಡೆಯುತ್ತಿರುವ ಸ್ಕ್ರೀನಿಂಗ್ ನಲ್ಲಿ ತಪ್ಪು ಮಾಹಿತಿ ಅಥವಾ ಹೆಚ್ಚಾಗಿ ನೆಗೆಟಿವ್ ಎಂಬ ವರದಿ ನೀಡುವ ಸಾಧ್ಯತೆಯಿದೆ ಎಂದು INSACOG ತಿಳಿಸಿದೆ.
S-gene ಡ್ರಾಪ್ಔಟ್ ಓಮಿಕ್ರಾನ್‌ನಂತೆಯೇ ಒಂದು ಆನುವಂಶಿಕ ಬದಲಾವಣೆಯಾಗಿದೆ. ಇತ್ತೀಚೆಗೆ ವರದಿ ಮಾಡಲಾದ B.1.640.2 ವಂಶಾವಳಿಯನ್ನು ಮಾನಿಟರ್ ಮಾಡಲಾಗುತ್ತಿದೆ. ಇದರ ಕ್ಷಿಪ್ರ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ ಮತ್ತು ಇದು ವ್ಯಾಕ್ಸಿನ್ ನಂತಹ ಪ್ರತಿರಕ್ಷಣವನ್ನು ಮೀರಿ ಸೋಂಕುಗೊಳಿಸುವ ಲಕ್ಷಣಗಳನ್ನು ಹೊಂದಿದ್ದರೂ, ಪ್ರಸ್ತುತ ಕಾಳಜಿಯ ರೂಪಾಂತರವಲ್ಲ. ಇಲ್ಲಿಯವರೆಗೆ, ಭಾರತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು INSACOG ಹೇಳಿದೆ.
ಜನವರಿ 3 ರಂದು ಬಿಡುಗಡೆಯಾದ ಬುಲೆಟಿನ್‌ನಲ್ಲಿ, ಒಮಿಕ್ರಾನ್ ಈಗ ಭಾರತದಲ್ಲಿ ಸಮುದಾಯವಾಗಿ ಹರಡುತ್ತಿದೆ ಎಂದು INSACOG ಹೇಳಿತ್ತು. ದೆಹಲಿ ಮತ್ತು ಮುಂಬೈ ನಗರಗಳು ಅಪಾಯದ ಗಡಿಯಲ್ಲಿದ್ದು, ಒಮಿಕ್ರಾನ್ ಭಾರತದಲ್ಲಿ ಇನ್ಮುಂದೆ ಅಂತರಿಕವಾಗಿ ಹರಡುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಹೀಗಾಗಿ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಹಾಗೂ ಕೊರೋನಾ ಸೋಂಕಿತರ ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದೆ.