ಕೊರೊನಾ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ಸೋಂಕು ಮತ್ತೆ ವಿನಾಶಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಒಮಿಕ್ರಾನ್ ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ಮಾಗಸೂಚಿ ಜಾರಿಗೆ ಬಂದಿದೆ. ವಿಮಾನ ಪ್ರಯಾಣಿಕರು ಈಗ ವಿಮಾನ ನಿಲ್ದಾಣದಲ್ಲಿ 6 ಗಂಟೆ ಕಾಯಬೇಕಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಒಮಿಕ್ರಾನ್ ಪ್ರಕರಣಗಳು ಕಂಡುಬಂದಿರುವ 14 ಕ್ಕೂ ಹೆಚ್ಚು ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಯಲಿದೆ. ಇದೇ ಕಾರಣಕ್ಕೆ ಪ್ರಯಾಣಿಕರು 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯಬೇಕಿದೆ.
ಒಮಿಕ್ರಾನ್ ಮಧ್ಯೆ ವಿಮಾನಗಳ ಬೆಲೆ ಕೂಡ ಹೆಚ್ಚಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿಯಿಂದ ಲಂಡನ್ಗೆ ಪ್ರಯಾಣ ಬೆಳೆಸುವ ವಿಮಾನ ಟಿಕೆಟ್ ದರ ಸುಮಾರು 60,000 ರೂಪಾಯಿಯಿಂದ 1.5 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
ದೆಹಲಿಯಿಂದ ದುಬೈಗೆ ತೆರಳುವ ವಿಮಾನ ದರ 33,000 ರೂಪಾಯಿಯಾಗಿದೆ. ಈ ಹಿಂದೆ ದೆಹಲಿಯಿಂದ ದುಬೈಗೆ ಹೋಗಲು 20,000 ರೂಪಾಯಿ ಖರ್ಚು ಬರ್ತಿತ್ತು. ದೆಹಲಿಯಿಂದ ಅಮೆರಿಕಕ್ಕೆ ಈ ಹಿಂದೆ 90,000-1.2 ಲಕ್ಷ ರೂಪಾಯಿ ಇದ್ದ ಟಿಕೆಟ್ ದರ ಈಗ 1.5 ಲಕ್ಷಕ್ಕೆ ಏರಿಕೆಯಾಗಿದೆ.
ಚಿಕಾಗೋ, ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ನಗರಕ್ಕೆ ವಿಮಾನ ದರದಲ್ಲಿ ಶೇಕಡಾ 100ರಷ್ಟು ಹೆಚ್ಚಳವಾಗಿದೆ. ಬಿಸಿನೆಸ್ ಕ್ಲಾಸ್ ಟಿಕೆಟ್ 6 ಲಕ್ಷಕ್ಕೆ ಏರಿದೆ. ದೆಹಲಿಯಿಂದ ಟೊರಾಂಟೊ ವಿಮಾನ ದರ ಸುಮಾರು 80,000 ರೂಪಾಯಿಯಿಂದ 2.37 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.