ಕೆಲವರಿಗೆ ಗಂಟಲು ನೋವು, ಜ್ವರ ಮಾತ್ರವಿದೆ. ಮತ್ತೆ ಕೆಲವರಿಗೆ ಚಳಿ, ಜ್ವರ, ಕೆಮ್ಮು ಇದೆ. ಸೀನುವಿಕೆಯಂತೂ ಬಹುತೇಕರಲ್ಲಿ ಕಂಡುಬರುತ್ತಿದೆ. ಇಷ್ಟೊಂದು ರೋಗಲಕ್ಷಣಗಳು ಒಟ್ಟಾಗಿ ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದು ವೈದ್ಯಲೋಕಕ್ಕೆ ಗಾಬರಿ ಹುಟ್ಟಿಸಿದೆ.
ಜತೆಗೆ ಚಳಿಗಾಲ ಬೇರೆ, ಇನ್ನೇನು ಬೇಸಿಗೆ ಶುರುವಾಗುವ ಅಂಚಿನಲ್ಲಿದ್ದೇವೆ. ಹವಾಮಾನ ಏರಿಳಿತದಿಂದ ಎದುರಾಗುವ ಸಮಸ್ಯೆಗಳೇ ಇವು ಅಥವಾ ಕೊರೊನಾ ಮೂರನೇ ಅಲೆಯು ನಡೆಸುತ್ತಿರುವ ದಾಳಿಯೇ ಎಂದು ಸ್ಪಷ್ಟವಾಗಿ ಹೇಳಲಾಗದೆಯೇ ವಿಜ್ಞಾನಿಗಳು, ವೈದ್ಯರು ಗೊಂದಲ್ಲಿದ್ದಾರೆ.
2ನೇ ಅಲೆ ಎಬ್ಬಿಸಿ, ಲಕ್ಷಾಂತರ ಜನರನ್ನು ಬಲಿಪಡೆದ ಕೊರೊನಾ ರೂಪಾಂತರಿ ಡೆಲ್ಟಾ ಜತೆಗೆ ಹೊಸ ರೂಪಾಂತರಿ ಓಮಿಕ್ರಾನ್ ಸೇರಿಕೊಂಡು. ಅತ್ಯಧಿಕ ವೇಗವಾಗಿ ಪ್ರಸರಣ ಸಾಮರ್ಥ್ಯ ಹೊಂದಿರುವ ಓಮಿಕ್ರಾನ್ ವೈರಾಣುವು ಹೆಚ್ಚೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿಸುತ್ತಿದೆ. ಜತೆಗೆ ಡೆಲ್ಟಾ ವೈರಾಣು ಕೂಡ ಹರಡುತ್ತಲೇ ಇದೆ.
ಗಂಭೀರ ಅನಾರೋಗ್ಯವುಳ್ಳವರು ಆಸ್ಪತ್ರೆಗೆ ದಾಖಲಾಗುವಷ್ಟು ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಿವೆ. ಹಾಗಾಗಿ ಡೆಲ್ಟಾಕ್ರಾನ್ ಅಥವಾ ಡೆಲ್ಟಾಮಿಕ್ರಾನ್ ಎಂಬ ಎರಡು ಕೊರೊನಾ ರೂಪಾಂತರಿಗಳ ಜಂಟಿ ದಾಳಿಗೆ ಜನರು ವಿಶ್ವದಾದ್ಯಂತ ತುತ್ತಾಗುತ್ತಿದ್ದಾರೆ. ಎರಡೂ ತಳಿಗಳು ಒಟ್ಟಾಗಿ ದಾಳಿ ನಡೆಸಿವೆ. ಎರಡು ಸಾಂಕ್ರಾಮಿಕ ಅಲೆಗಳು ಒಟ್ಟಿಗೆಯೇ ಸಾಗುತ್ತಿವೆ ಎಂದು ಖ್ಯಾತ ವೈರಾಣು ತಜ್ಞ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಜಿ ಮುಖ್ಯಸ್ಥ ಡಾ. ಟಿ. ಜೇಕಬ್ ಜಾನ್ ಹೇಳಿದ್ದಾರೆ.
ಓಮಿಕ್ರಾನ್ ಸೋಂಕು ಗಂಟಲಿಗೆ ಕೇಂದ್ರೀಕರಿಸಿ ದಾಳಿ ನಡೆಸುತ್ತಿದೆ. ಕೊರೊನಾ ಲಸಿಕೆ ಪಡೆದವರಲ್ಲೂ ಕೂಡ ಓಮಿಕ್ರಾನ್ ಸೋಂಕು ಸೌಮ್ಯವಾದ ರೋಗಲಕ್ಷಣ ಉಂಟುಮಾಡಿಯೇ ತೀರುತ್ತಿದೆ. ಲಸಿಕೆಯ ರೋಗನಿರೋಧಕತೆಯನ್ನು ಕೂಡ ತಪ್ಪಿಸಿಕೊಂಡು ಓಮಿಕ್ರಾನ್ ಸೋಂಕು ಹರಡುತ್ತಿದೆ. ಮಕ್ಕಳಲ್ಲಿ ಹೆಚ್ಚಾಗಿ ಜ್ವರ, ಗಂಟಲು ನೋವು ಕಾಣಿಸಿಕೊಳ್ಳುತ್ತಿದೆ. ಅದೃಷ್ಟವಶಾತ್, 3 ರಿಂದ 7 ದಿನಗಳಲ್ಲಿ ರೋಗಲಕ್ಷಣ ಕಡಿಮೆಯಾಗಿ ಹುಷಾರಾಗುತ್ತಿದ್ದಾರೆ.