
ಜೂನ್ 28 ರಂದು ದಳಪತಿ ವಿಜಯ್ ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಅವರು 10 ನೇ ತರಗತಿ ಮತ್ತು 12 ನೇ ತರಗತಿಯ ಅತ್ಯುತ್ತಮ ಸಾಧಕರನ್ನು ಸನ್ಮಾನಿಸಿದರು. ಸಮಾರಂಭದ ಕ್ಷಣವೊಂದರ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಾದ್ಯಂತ ಚರ್ಚೆಗಳನ್ನು ಹುಟ್ಟುಹಾಕಿದೆ.
ಶೈಕ್ಷಣಿಕ ಸಾಧನೆಗಳಿಗಾಗಿ ವಿದ್ಯಾರ್ಥಿನಿಯೊಬ್ಬಳನ್ನು ಗೌರವಿಸಿ ನಟ ವಿಜಯ್ ಆಕೆಯ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ಕೊಡಲು ನಿಲ್ಲುತ್ತಾರೆ. ಈ ವೇಳೆ ವಿದ್ಯಾರ್ಥಿನಿ, ನಟ ವಿಜಯ್ ಗೆ ಹೆಗಲ ಮೇಲೆ ಹಾಕಿದ್ದ ಕೈ ತೆಗೆಯುವಂತೆ ಸೂಚಿಸಿರುವುದಾಗಿ ವೀಡಿಯೊ ತೋರಿಸುತ್ತದೆ. ಕೆಲವರು ಇದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ನಟನಿಗೆ ತನ್ನ ಸ್ಥಾನ ತೋರಿಸಿದ ಈ ಹುಡುಗಿಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
ಆದರೆ ಈ ವಿಡಿಯೋದ ಮುಂದುವರಿದ ಭಾಗದಲ್ಲಿ ಇರುವುದೇ ಬೇರೆ. ತನ್ನ ಭುಜದ ಮೇಲಿದ್ದ ಕೈಯನ್ನು ನಟ ವಿಜಯ್‌ಗೆ ತೆಗೆಯುವಂತೆ ಹೇಳಿದ ನಂತರ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ ವಿದ್ಯಾರ್ಥಿನಿ ಖುದ್ದು ನಟ ವಿಜಯ್ ತೋಳನ್ನು ತಾನೇ ಹಿಡಿದುಕೊಂಡು ನಿಲ್ಲುತ್ತಾಳೆ. ಆದರೆ ಕೆಲವರು ವಿಜಯ್ ಗೆ ಕೈ ತೆಗೆಯುವಂತೆ ವಿದ್ಯಾರ್ಥಿನಿ ಸೂಚಿಸಿದ ನಿರ್ದಿಷ್ಟ ತುಣುಕನ್ನಷ್ಟೇ ವೈರಲ್ ಮಾಡಿದ್ದಾರೆ.
ಅಪೂರ್ಣ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ನೆಟ್ಟಿಗರು ಕಿಡಿಕಾರಿದ್ದಾರೆ.