ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ‘ಗದರ್’ ಚಿತ್ರದ ಮುಂದುವರೆದ ಭಾಗ ‘ಗದರ್ 2’ ಯಶಸ್ಸಿನ ಕಾರಣಕ್ಕೆ ಭಾರಿ ಸಂತಸದಲ್ಲಿದ್ದಾರೆ. ಸನ್ನಿ ಡಿಯೋಲ್, ಅಮಿಷಾ ಪಟೇಲ್ ಮೊದಲಾದವರ ಅಭಿನಯವಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದ್ದು, ಕೇವಲ ಒಂಬತ್ತು ದಿನಗಳ ಪ್ರದರ್ಶನದಲ್ಲಿ ಈಗಾಗಲೇ 336 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
ಇದರ ಮಧ್ಯೆ ‘ಗದರ್ 2’ ಯಶಸ್ಸಿನ ಗುಂಗಿನಲ್ಲಿರುವ ಸನ್ನಿ ಡಿಯೋಲ್ ಅವರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸದ ಕಾರಣ ಮುಂಬೈನ ಜುಹು ಬಳಿಯ ಗಾಂಧಿ ಗ್ರಾಮ ರಸ್ತೆಯಲ್ಲಿರುವ ಸನ್ನಿ ಡಿಯೋಲ್ ಅವರ ಬಂಗಲೆ ಈಗ ಹರಾಜಿಗೆ ಬಂದಿದೆ. ಸಾಲದ ಮೊತ್ತ 55,99,80,766 ಕೋಟಿ ರೂಪಾಯಿಗಳನ್ನು ಪಾವತಿಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರಂದು ಈ ಬಂಗಲೆಯನ್ನು ಇ ಹರಾಜು ಮಾಡಲಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದೆ.
ಸನ್ನಿ ಡಿಯೋಲ್ ಅವರ ಮೂಲ ಹೆಸರು ಅಜಯ್ ಸಿಂಗ್ ಡಿಯೋಲ್ ಎಂಬುದಾಗಿದ್ದು, ಈ ಹೆಸರಿನಲ್ಲಿಯೇ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸನ್ನಿ ಡಿಯೋಲ್ ಈ ಬಂಗಲೆಯನ್ನು ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ಆಗಿ ಬಳಸುತ್ತಿದ್ದರು ಎನ್ನಲಾಗಿದ್ದು, ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಈ ಹಿಂದೆ ಬಂಗಲೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಹಲವು ಚಿತ್ರಗಳ ಪ್ರದರ್ಶನವನ್ನು ಸಹ ಇಲ್ಲಿ ನಡೆಸಲಾಗಿದೆ. ಮೂಲಗಳ ಪ್ರಕಾರ ಹರಾಜಿಗೂ ಮುನ್ನ ಸನ್ನಿ ಡಿಯೋಲ್ ಸಾಲದ ಬಾಕಿ ಮೊತ್ತವನ್ನು ಪಾವತಿಸಲಿದ್ದಾರೆ ಎನ್ನಲಾಗಿದ್ದು, ಕಾನೂನು ಪ್ರಕ್ರಿಯೆಗಳ ಬಳಿಕ ಮತ್ತೆ ಇದನ್ನು ಸನ್ನಿ ಡಿಯೋಲ್ ಅವರ ವಶಕ್ಕೆ ನೀಡುವ ಸಾಧ್ಯತೆ ಇದೆ.