5 ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಜನರ ಜೀವನ ಹೇಗಿತ್ತು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಈ ಯುಗದಲ್ಲಿ ಅನೇಕ ಮನರಂಜನೆಯ ವಿಧಾನಗಳಿವೆ. ಟಿವಿ, ಮೊಬೈಲ್, ಕಂಪ್ಯೂಟರ್ ಹೀಗೆ ಅನೇಕ ಉಪಕರಣಗಳು ಜನರನ್ನು ರಂಜಿಸುತ್ತವೆ. ಆದ್ರೆ ಸಾವಿರಾರು ವರ್ಷಗಳ ಹಿಂದೆ ಜನರು ಮನರಂಜನೆಗಾಗಿ ಏನು ಮಾಡುತ್ತಿದ್ದರು ಅನ್ನೋದಕ್ಕೆ ಈಗ ಉತ್ತರ ಸಿಕ್ಕಿದೆ. ಇರಾಕ್‌ನಲ್ಲಿ ನಡೆಸಲಾದ ಉತ್ಖನನದ ಸಮಯದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಪಬ್ ಮತ್ತು ರೆಸ್ಟೋರೆಂಟ್‌ನ ಅವಶೇಷಗಳು ಕಂಡುಬಂದಿವೆ.
ದಕ್ಷಿಣ ಇರಾಕ್‌ನಲ್ಲಿ ಉತ್ಖನನದ ಸಮಯದಲ್ಲಿ ಸಂಶೋಧಕರು ಇದನ್ನು ಪತ್ತೆ ಮಾಡಿದ್ದಾರೆ. ಕ್ರಿಸ್ತಪೂರ್ವ 2700 ರಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದು ಈ ಆವಿಷ್ಕಾರದ ನಂತರ ಬಹಿರಂಗವಾಗಲಿದೆ. ಉತ್ಖನನದಲ್ಲಿ ಮಣ್ಣಿನ ಒಲೆ, ಫ್ರಿಡ್ಜ್, ರೆಸ್ಟೋರೆಂಟ್ ಮತ್ತು ಪಬ್ ಕಂಡುಬಂದಿವೆ. ಮೀನಿನ ಅವಶೇಷಗಳನ್ನು ಒಳಗೊಂಡಿರುವ ಶಂಕುವಿನಾಕಾರದ ಬಟ್ಟಲುಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಮತ್ತು ಪಿಸಾ ವಿಶ್ವವಿದ್ಯಾನಿಲಯದ ಜಂಟಿ ತಂಡವು ಪ್ರಾಚೀನ ಶೈತ್ಯೀಕರಣ ವ್ಯವಸ್ಥೆ, ದೊಡ್ಡ ಓವನ್, ಡಿನ್ನರ್‌ಗಳಿಗೆ ಬೆಂಚುಗಳು ಮತ್ತು ಸುಮಾರು 150 ಸರ್ವಿಂಗ್ ಬೌಲ್‌ಗಳ ಅವಶೇಷಗಳನ್ನು ಸಹ ಪತ್ತೆ ಮಾಡಿದೆ.
ಉತ್ಖನನದಲ್ಲಿ ಬಿಯರ್‌ನ ಪುರಾವೆಗಳು ಸಹ ಕಂಡುಬಂದಿವೆ. ನಮ್ಮ ಪೂರ್ವಜರು 5000 ವರ್ಷಗಳ ಹಿಂದೆ ಬಿಯರ್ ಕುಡಿಯುತ್ತಿದ್ದರು ಎಂದು ಸಂಶೋಧಕರು ಹೇಳುತ್ತಾರೆ. ಫ್ರಿಜ್, ನೂರಾರು ಪಾತ್ರೆಗಳು, ಜನರು ಕುಳಿತುಕೊಳ್ಳಲು ಬೆಂಚ್‌ಗಳನ್ನೆಲ್ಲ ನೋಡ್ತಿದ್ರೆ ಇಲ್ಲಿ ಎಲ್ಲರೂ ವಿಶ್ರಾಂತಿಗಾಗಿ ಬರುತ್ತಿದ್ದರು ಅನ್ನೋದು ಖಚಿತವಾಗಿದೆ. ಲಗಾಶ್ ಎಂದು ಕರೆಯಲ್ಪಡುವ 1000 ಎಕರೆಗಳಷ್ಟು ವಿಸ್ತಾರವಾದ ಸ್ಥಳದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ.
ಇದು ಆರಂಭಿಕ ರಾಜವಂಶದ ಅವಧಿಯಲ್ಲಿ ಕೈಗಾರಿಕಾ ಕೇಂದ್ರವಾಗಿತ್ತು. ಸಂಶೋಧನೆಯ ಪ್ರಕಾರ, ಲಗಾಶ್ ದಕ್ಷಿಣ ಮೆಸೊಪೆಟೊಮಿಯಾದ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇದು ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಕೇಂದ್ರವೂ ಆಗಿತ್ತು. ಇಲ್ಲಿ ವಾಸಿಸುವ ಜನರು ಜಾನುವಾರುಗಳನ್ನು ಸಾಕುತ್ತಿದ್ದರು, ಮೀನುಗಾರಿಕೆ ಮತ್ತು ಕೃಷಿ ಮಾಡುತ್ತಿದ್ದರು. ಸುಮಾರು ಕ್ರಿಸ್ತಪೂರ್ವ 2700ರಲ್ಲಿ ಜನರು ಹೋಟೆಲ್, ಪಬ್, ರೆಸ್ಟೋರೆಂಟ್‌ಗಳನ್ನು ಬಳಸುತ್ತಿದ್ದರು ಎಂಬುದಕ್ಕೀಗ ಪುರಾವೆ ಸಿಕ್ಕಂತಾಗಿದೆ.