ನವದೆಹಲಿ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ನುಂಗಿದ್ದು, ಆಪರೇಷನ್ ಮಾಡಿದ ವೈದ್ಯರು ಯಶಸ್ವಿಯಾಗಿ ನಾಣ್ಯ, ಆಯಸ್ಕಾಂತಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಇದನ್ನು ನುಂಗಿದರೆ ದೇಹ ಸದೃಡವಾಗಿರುತ್ತೆಂದು ನಂಬಿದ ವ್ಯಕ್ತಿ 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ನುಂಗಿದ್ದಾನೆ. 20ಕ್ಕೂ ಹೆಚ್ಚು ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 26 ವರ್ಷದ ವ್ಯಕ್ತಿಯನ್ನು ಸರ್ ಗಂಗಾ ರಾಮ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಡಾ.ತರುಣ್ ಮಿತ್ತಲ್, ಡಾ.ಆಶಿಶ್ ಡೇ, ಡಾ.ಅನ್ಮೋಲ್ ಅಹುಜಾ, ಡಾ.ವಿಕ್ರಮ್ ಸಿಂಗ್, ಡಾ.ತನುಶ್ರೀ ಮತ್ತು ಡಾ.ಕಾರ್ತಿಕ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡವು ರೋಗಿಯ ಹೊಟ್ಟೆ ಮತ್ತು ಕರುಳಿನಿಂದ ವಸ್ತುಗಳನ್ನು ಸೂಕ್ಷ್ಮವಾಗಿ ಹೊರತೆಗೆಯಿತು.
ರೋಗಿಯ ಜೀರ್ಣಾಂಗವ್ಯೂಹದಿಂದ 1, 2 ಮತ್ತು 5 ರೂ.ಗಳ ಮುಖಬೆಲೆಯ ಒಟ್ಟು 39 ನಾಣ್ಯಗಳು ಮತ್ತು ವಿವಿಧ ಆಕಾರಗಳ 37 ಕಾಂತಗಳನ್ನು ಹೊರತೆಗೆಯಲಾಗಿದೆ. ಏಳು ದಿನಗಳ ಆರೈಕೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.