ಮೋಸ ಮಾಡಿದವರಿಗೆ ಹೆಚ್ಚೆಂದರೆ ಎಷ್ಟು ಶಿಕ್ಷೆಯಾಗಬಹುದು ? ವಿವಿಧ ದೇಶಗಳ ಕಾನೂನಿನ ಪ್ರಕಾರ 6 ತಿಂಗಳು, ಒಂದು ವರ್ಷ ಅಥವಾ ಜೀವಾವಧಿ ಸಜೆಯಾಗಬಹುದು. ಇದನ್ನು ಬಿಟ್ಟರೆ ಮರಣದಂಡನೆಯೇ ಅತಿ ದೊಡ್ಡ ಶಿಕ್ಷೆ. ಆದರೆ ಹಣಕಾಸಿನ ವಂಚನೆಯ ಆರೋಪದ ಮೇಲೆ 1 ಲಕ್ಷದ 41 ಸಾವಿರದ 78 ವರ್ಷಗಳ ಶಿಕ್ಷೆ ವಿಧಿಸಿರುವುದನ್ನು ಎಂದಾದರೂ ಕೇಳಿದ್ದೀರಾ ? ಇಷ್ಟು ದೀರ್ಘಾವಧಿಯ ಸೆರೆವಾಸ ವಿಚಿತ್ರ ಎನಿಸಬಹುದು. ಆದರೆ ಇದು ನಿಜಸಂಗತಿ.
ಚಮೋಯ್ ಥಿಪ್ಯಾಸೊ ಎಂಬ ಈ ದುಷ್ಟ ಮಹಿಳೆ 16,000 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಳು. ಇದಕ್ಕಾಗಿ ಆಕೆಗೆ 1,41,078 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಮಹಿಳೆ ಸುಮಾರು 16.5 ಶತಕೋಟಿ ರೂಪಾಯಿಗಳನ್ನು ದೋಚಿದ್ದಳು. ಉಳಿತಾಯ ಯೋಜನೆಯ ಹೆಸರಿನಲ್ಲಿ ತಿಪ್ಯಾಸೋ ವಂಚನೆಯ ಸಂಚು ಹೆಣೆದಿದ್ದಳು. ಹಣಕಾಸು ಕಂಪನಿ ಮತ್ತು ಹೂಡಿಕೆ ಯೋಜನೆ ನಡೆಸುವ ಮೂಲಕ ಈಕೆ ಜನರನ್ನು ವಂಚಿಸುತ್ತಿದ್ದಳು.
ಭಾರತದಲ್ಲಿ ಈ ಉಳಿತಾಯ ಯೋಜನೆಗಳನ್ನು ‘ಚಿಟ್ ಫಂಡ್‌ಗಳು’ ಎಂದು ಕರೆಯಲಾಗುತ್ತದೆ. ಭಾರತದೊಂದಿಗೆ ವಂಚಕಿಗೇನು ಸಂಬಂಧ ? ಥಾಯ್ಲೆಂಡ್‌ನ ಚಮೊಯ್ ತಿಪ್ಯಾಸೊಗೆ ನ್ಯಾಯಾಲಯ 1989 ರಲ್ಲಿ ಶಿಕ್ಷೆ ವಿಧಿಸಿದೆ. ಆ ‘ಚಿಟ್ ಫಂಡ್’ ಕಂಪನಿ ಭಾರತದ ಕೇರಳದಲ್ಲೂ ಅನೇಕರಿಗೆ ಮೋಸ ಮಾಡಿದೆ. ಈ ಮಹಿಳೆ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಆಮಿಷವೊಡ್ಡಿದ್ದಳು. ಹೂಡಿಕೆಯ ಬದಲಿಗೆ, ಸ್ವಲ್ಪ ಸಮಯದ ನಂತರ ಹೆಚ್ಚಿನ ಆದಾಯ ಬರುವ ಬಾಂಡ್ ನೀಡುವುದಾಗಿ ಹೇಳಿದ್ದಳು.
ಹಗರಣ ನಡೆದಿದ್ದು ಹೇಗೆ ?
ತಿಪ್ಯಾಸೊ ಆಗ ಥೈಲ್ಯಾಂಡ್‌ನ ಪೆಟ್ರೋಲಿಯಂ ಅಥಾರಿಟಿ, ಸರ್ಕಾರಿ ತೈಲ ಕಂಪನಿಯ ಉದ್ಯೋಗಿಯಾಗಿದ್ದಳು. ಈ ಕಂಪನಿಯನ್ನು ಈಗ ಪಿಟಿಟಿ ಎಂದು ಕರೆಯಲಾಗುತ್ತದೆ. ಹಗರಣವನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ಥಿಪ್ಯಾಸೊ ರಾಯಲ್ ಥಾಯ್ ಏರ್ ಫೋರ್ಸ್‌ನಲ್ಲಿ ಸಂಪರ್ಕಗಳನ್ನು ಬಳಸಿದ್ದಳು. ಆಕೆಯನ್ನು ನಂಬಿ ಸಾವಿರಾರು ಜನರು ತಮ್ಮಲ್ಲಿದ್ದ ಹಣವನ್ನೆಲ್ಲ ಹೂಡಿಕೆ ಮಾಡಿದ್ದರು.
1980ರ ದಶಕದಲ್ಲಿ ಈ ಹಗರಣವನ್ನು ಭೇದಿಸಿದಾಗ, ಚಿಟ್ ಫಂಡ್ ಕಂಪನಿಯನ್ನು ಮುಚ್ಚಲಾಯಿತು ಮತ್ತು ಆರೋಪಿ ಮಹಿಳೆಯನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದಲ್ಲೇ ಮಹಿಳೆಗೆ ಭಾರೀ ಶಿಕ್ಷೆಯಾಗಿತ್ತು, ಆದರೆ ಕೆಲವೇ ದಿನಗಳಲ್ಲಿ ಆಕೆ ಜೈಲಿನಿಂದ ತಪ್ಪಿಸಿಕೊಂಡಿದ್ದರಿಂದ ಸಂತ್ರಸ್ಥರಿಗೆ ನ್ಯಾಯ ದೊರಕಲೇ ಇಲ್ಲ. ನಂತರ ವಂಚನೆಯ ಪ್ರಕರಣದಲ್ಲಿ ಗರಿಷ್ಠ ಇಪ್ಪತ್ತು ವರ್ಷಗಳ ಶಿಕ್ಷೆಯ ನಿಬಂಧನೆ ಇರುವ ಕಾನೂನನ್ನು ಅಂಗೀಕರಿಸಲಾಯಿತು.