ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಮಂಗಳವಾರ ತಮ್ಮ 87 ನೇ ವಯಸ್ಸಿನಲ್ಲಿ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ,
ಅವರಿಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೇರಿದಂತೆ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದಿಸಿದ್ದಾರೆ. ಕಲಿಕೆಗೆ ಎಂದಿಗೂ ವಯಸ್ಸಾಗಲ್ಲ ಎಂದು ಓಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿ, ಚೌತಾಲಾ ಅವರ ಅಂಕಪಟ್ಟಿ ಲಗತ್ತಿಸಿದ್ದಾರೆ.
ಹರ್ಯಾಣ ಓಪನ್ ಬೋರ್ಡ್ ಅಡಿಯಲ್ಲಿ ಕಳೆದ ವರ್ಷ 12 ನೇ ತರಗತಿ ಪರೀಕ್ಷೆಗೆ ಚೌತಾಲಾ ಹಾಜರಾಗಿದ್ದರು. ಅವರು ಇನ್ನೂ 10 ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲವಾದ್ದರಿಂದ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. 10 ನೇ ತರಗತಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದು, ತಡೆ ಹಿಡಿಯಲಾಗಿದ್ದ 12 ನೇ ತರಗತಿ ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದೆ.