ವೈವಾಹಿಕ ಅತ್ಯಾಚಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ಪುಣೆಯ ಪುರುಷರ ಹಕ್ಕುಗಳ ಸಂಘಟನೆಯೊಂದು ಉಪವಾಸ ಸತ್ಯಾಗ್ರಹದಲ್ಲಿ ಬ್ಯುಸಿಯಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಈ ವೈವಾಹಿಕ ಅತ್ಯಾಚಾರದ ಸಂಬಂಧ ಸಲ್ಲಿಸಲಾಗಿರುವ ಅರ್ಜಿ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿರುವ ಪುರುಷರು ಇದೇ ವೇಳೆ ಟ್ವಿಟರ್ ಸಿಇಓ ಎಲಾನ್ ಮಸ್ಕ್ ಭಾವಚಿತ್ರಕ್ಕೆ ಆರತಿ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
’ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್’ ವತಿಯಿಂದ ಆಯೋಜಿಸಲಾದ ಈ ಪ್ರತಿಭಟನೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ಪ್ರತಿಮೆ ಎದುರು ಮಾರ್ಚ್ 25 ಹಾಗೂ 26ರಂದು ಈ ಸಂಬಂಧ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
“ಎಲ್ಲದಕ್ಕೂ ನಮ್ಮನ್ನೇ ದೂರಲಾಗುತ್ತದೆ ಹಾಗೂ ಮಹಿಳೆಯರು ನಮ್ಮ ವಿರುದ್ಧ ಸುಳ್ಳು ದೂರುಗಳನ್ನು ನೀಡುತ್ತಾರೆ. ಆದರೆ ನಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇರುವ ಏಕೈಕ ತಾಣವೆಂದರೆ ಅದು ಟ್ವಿಟರ್. ಹಾಗಾಗಿ ನಾವು ಮಸ್ಕ್‌ಗೆ ಆರತಿ ತೆಗೆದು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ,” ಎಂದು ಸಂಘಟನೆಯ ಸ್ವಯಂ ಸೇವಕರೊಬ್ಬರು ತಿಳಿಸಿದ್ದಾರೆ.
ಕೌಟುಂಬಿಕ ಹಿಂಸಾಚಾರದ ಪುರುಷ ಸಂತ್ರಸ್ತರಿಗೆ ನ್ಯಾಯ ಕೇಳುತ್ತಿರುವ ಈ ಸಂಘಟನೆಯು, ಲಿಂಗ ತಾರತಮ್ಯವಿಲ್ಲದ ಕಾನೂನುಗಳು ಬರಲಿ ಎಂದು ಆಗ್ರಹಿಸುತ್ತಿವೆ.
ವೈವಾಹಿಕ ಅತ್ಯಾಚಾರ ಸಂಬಂಧ ಸಲ್ಲಿಸಲಾದ ಅರ್ಜಿಗಳ ಆಲಿಕೆಯನ್ನು ಮೇ 9ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸಲು ಆಗ್ರಹಿಸಿ ಅಖಿಲ ಭಾರತ ಡೆಮಾಕ್ರಾಟಿಕ್ ಮಹಿಳೆಯರ ಸಂಘ (ಎಐಡಬ್ಯೂಎ) ದೆಹಲಿ ಹೈಕೋರ್ಟ್ ಈ ಸಂಬಂಧ ಕೊಟ್ಟಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ವಿಚಾರವಾಗಿ ದೆಹಲಿಯ ದ್ವಿಸದಸ್ಯ ಪೀಠವು ವೈವಾಹಿಕ ಅತ್ಯಾಚಾರ ಸಂಬಂಧ ವಿಭಿನ್ನ ತೀರ್ಪು ಕೊಟ್ಟಿತ್ತು. ಪೀಠದಲ್ಲಿದ್ದ ನ್ಯಾಯಾಧೀಶ ಹರಿ ಶಂಕರ್ ವೈವಾಹಿಕ ಅತ್ಯಾಚಾರವನ್ನು ಅಪರಾಧವೆನ್ನಲು ಬರುವುದಿಲ್ಲ ಎಂದರೆ, ಮತ್ತೊಬ್ಬ ನ್ಯಾಯಾಧೀಶ ರಾಜೀವ್ ಶಾಕ್ದೆರ್, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬಹುದು ಎಂದಿದ್ದರು.