ಭಾರತದ ಹಾಕಿ ತಂಡ ಅಧ್ಬುತ ಗೆಲುವಿನೊಂದಿಗೆ ಟೋಕಿಯೊ ಒಲಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದೆ. ನ್ಯೂಜಿಲ್ಯಾಂಡ್ ತಂಡವನ್ನು 3-2ರಿಂದ ಸೋಲಿಸಿದ ಭಾರತ ತಂಡ ನಿರೀಕ್ಷೆ ಮೂಡಿಸಿದೆ. ಕಳೆದ ನಾಲ್ಕು ದಶಕಗಳಲ್ಲಿ ಮೊದಲ ಒಲಿಂಪಿಕ್ಸ್ ಪದಕ ಗೆಲ್ಲಲು ಪ್ರಯತ್ನದಲ್ಲಿರುವ ಭಾರತ ತಂಡ ಗ್ರೂಪ್ ಎ ಪಂದ್ಯವನ್ನು ಗೆದ್ದುಕೊಂಡಿದೆ.
1980 ರಿಂದ ಭಾರತಕ್ಕೆ ಹಾಕಿಯಲ್ಲಿ ಒಲಂಪಿಕ್ಸ್ ಪದಕ ಸಿಕ್ಕಿಲ್ಲ. ಭಾರತದ ಪುರುಷರ ಹಾಕಿ ತಂಡ, ಜುಲೈ 25 ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಆಸ್ಟ್ರೇಲಿಯಾ ಕೂಡ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದೆ. ಆತಿಥೇಯ ಜಪಾನ್ ತಂಡವನ್ನು ಆಸ್ಟ್ರೇಲಿಯಾ 5-3ರಿಂದ ಸೋಲಿಸಿತು. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅರ್ಜೆಂಟೀನಾ, ಸ್ಪೇನ್ ಮತ್ತು ಜಪಾನ್ ಎ ಗುಂಪಿನಲ್ಲಿವೆ. ಬೆಲ್ಜಿಯಂ, ಕೆನಡಾ, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಬಿ ಗುಂಪಿನಲ್ಲಿವೆ. ಎರಡೂ ಗುಂಪುಗಳ ಟಾಪ್ -4 ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲಿದೆ.
ಹಾಕಿಯ ಗ್ರೂಪ್ ಪಂದ್ಯಗಳು ಜುಲೈ 30 ರವರೆಗೆ ನಡೆಯಲಿವೆ. ನಾಕೌಟ್ ಸುತ್ತಿನ ಪಂದ್ಯಗಳು ಆಗಸ್ಟ್ 1 ರಿಂದ ಶುರುವಾಗಲಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 1 ರಂದು ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳು ಆಗಸ್ಟ್ 3 ರಂದು ನಡೆಯಲಿದ್ದು, ಚಿನ್ನ ಮತ್ತು ಕಂಚಿನ ಪದಕ ಪಂದ್ಯಗಳು ಆಗಸ್ಟ್ 5 ರಂದು ನಡೆಯಲಿದೆ. 2016 ರ ರಿಯೊ ಒಲಿಂಪಿಕ್ಸ್ ಭಾರತ ಹಾಕಿ ತಂಡ 8 ನೇ ಸ್ಥಾನದಲ್ಲಿತ್ತು.