2032 ರ ಒಲಿಂಪಿಕ್ ಕ್ರೀಡಾಕೂಟ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಐಒಸಿಯ 138 ನೇ ಋತುವಿನಲ್ಲಿ 2032 ರ ಬೇಸಿಗೆ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸುವ ಹಕ್ಕು ಬ್ರಿಸ್ಬೇನ್ ಗೆ ಸಿಕ್ಕಿದೆ.
ಆಸ್ಟ್ರೇಲಿಯಾ ಈ ಮೊದಲು ಎರಡು ಬಾರಿ ಒಲಿಂಪಿಕ್ಸ್ ಆತಿಥ್ಯ ವಹಿಸಿತ್ತು. 1956 ರಲ್ಲಿ ಮೆಲ್ಬೋರ್ನ್ ಮತ್ತು 2000ರಲ್ಲಿ ಸಿಡ್ನಿಯಲ್ಲಿ ಒಲಿಂಪಿಕ್ಸ್ ಆಯೋಜಿಸಲಾಗಿತ್ತು. ಈ ಬಾರಿ ಟೋಕಿಯೊ ಒಲಿಂಪಿಕ್ಸ್ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಯೋಜಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್ ಜುಲೈ 23 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 8 ರಂದು ಕೊನೆಗೊಳ್ಳಲಿದೆ. ಈ ಬಾರಿ ಭಾರತದಿಂದ 127 ಆಟಗಾರರು ಸ್ಪರ್ಧೆಗಿಳಿಯಲಿದ್ದಾರೆ.
ಟೋಕಿಯೊ ನಂತರ ಒಲಿಂಪಿಕ್ ಕ್ರೀಡಾಕೂಟವು ಫ್ರಾನ್ಸ್ ನ ಪ್ಯಾರಿಸ್‌ನಲ್ಲಿ 2024 ರಲ್ಲಿ ನಡೆಯಲಿದೆ. ನಂತರ 2028 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. 2032 ಕ್ರೀಡಾಕೂಟಕ್ಕೆ ಆತಿಥ್ಯವಹಿಸಲು ಅನೇಕ ದೇಶಗಳು ಮುಂದೆ ಬಂದಿದ್ದವು. ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಇಂಡೋನೇಷ್ಯಾ, ಹಂಗೇರಿ, ಚೀನಾ, ಕತಾರ್, ಜರ್ಮನಿ ಸೇರಿದಂತೆ ಅನೇಕ ದೇಶಗಳು ಒಲಂಪಿಕ್ಸ್ ಆಯೋಜನೆಗೆ ಆಸಕ್ತಿ ತೋರಿದ್ದವು.