ಟೋಕಿಯೋ ಒಲಿಂಪಿಕ್ಸ್ ವೇಳೆ ತಪ್ಪಾದ ಬಸ್ ಏರಿ ತಪ್ಪಾದ ಕ್ರೀಡಾಂಗಣ ತಲುಪಿದ ಒಂದೇ ಕಾರಣಕ್ಕೆ ವರ್ಷಗಳ ಬೆವರಿನ ಶ್ರಮವನ್ನೆಲ್ಲಾ ಹೊಳೆಯಲ್ಲಿ ಹುಣಸೆ ಕಿವುಚಿದಂತೆ ಮಾಡಿಕೊಳ್ಳುತ್ತಿದ್ದ ಜಮೈಕಾದ ಹರ್ಡಲ್ಸ್ ಓಟಗಾರ ಹಾನ್‌ಸ್ಲೇ ಪಾರ್ಚ್ಮೆಂಟ್ ನೆರವಿಗೆ ಬಂದು, ಅವರನ್ನು ಸರಿಯಾದ ಟೈಮಿಗೆ ಸರಿಯಾದ ಕ್ರೀಡಾಂಗಣ ತಲುಪುವಂತೆ ಮಾಡಿದ್ದ ಜಪಾನ್‌ನ ಸ್ವಯಂ ಸೇವಕಿಯೊಬ್ಬರು ಸುದ್ದಿ ಮಾಡಿದ್ದರು.
ಇದೀಗ ತಮಗೆ ಸಹಾಯ ಮಾಡಿದ ಆ ಸ್ವಯಂ ಸೇವಕಿ ತ್ರಿಜಾನಾ ಸ್ಟೋಜ್ಕೋವಿಕ್ ಅವರನ್ನು ಭೇಟಿ ಮಾಡಿ, “ನಿಮ್ಮ ಸಹಾಯವಿಲ್ಲದೇ ಈ ಚಿನ್ನದ ಪದಕ ಬರಲು ಆಗುತ್ತಿರಲಿಲ್ಲ. ಜಪಾನೀ ಜನ ಬಹಳ ಸಹೃದಯಿಗಳು” ಎಂದು ವಿನಮ್ರವಾಗಿ ಆಕೆಗೆ ಧನ್ಯವಾದ ತಿಳಿಸಿ ನಿಜವಾದ ಚಾಂಪಿಯನ್‌ನಂತೆ ನಡೆದುಕೊಂಡಿದ್ದಾರೆ ಪಾರ್ಚ್ಮೆಂಟ್. ಸ್ವಯಂ ಸೇವಕಿಯಿಂದ ಪಡೆದಿದ್ದ ಹಣವನ್ನು ಹಿಂದಿರುಗಿಸಿದ ಪಾರ್ಚ್ಮೆಂಟ್, ಅದರೊಂದಿಗೆ ಆಕೆಗೊಂದು ಟೀ ಶರ್ಟ್ ಅನ್ನೂ ನೀಡಿದ್ದಾರೆ.
ಫೈನಲ್ ಸುತ್ತಿನ ಓಟ ನಡೆಯುವ ಜಾಗದ ಬದಲು ಬೇರೆಲ್ಲೋ ಹೋಗಿದ್ದ ಪಾರ್ಚ್ಮೆಂಟ್ ಓಟಕ್ಕೆ ಗೈರಾಗುವ ಸಾಧ್ಯತೆ ಇತ್ತು. ಆದರೆ ಈ ವೇಳೆ ಅವರ ರಕ್ಷಣೆಗೆ ಬಂದ ಸ್ವಯಂ ಸೇವಕರೊಬ್ಬರು ಪಾರ್ಚ್ಮೆಂಟ್‌ಗೆ ಹಣ ಕೊಟ್ಟು ಟ್ಯಾಕ್ಸಿ ಪಡೆದು ಸರಿಯಾದ ಜಾಗ ತಲುಪಲು ನೆರವಾಗಿದ್ದಾರೆ. ಓಟ ಶುರುವಾಗುವ ಸರಿಯಾದ ಸಮಯಕ್ಕೆ ಸ್ಥಳ ತಲುಪಿದ ಪಾರ್ಚ್ಮೆಂಟ್ ಚಿನ್ನದ ಪದಕ ಗೆದ್ದಿದ್ದಾರೆ.
“ಸೆಮಿಫೈನಲ್ ಪಂದ್ಯದ ವೇಳೆ ತಪ್ಪಾದ ಬಸ್ ಏರಿದ್ದ ನಾನು ತಪ್ಪಾದ ಜಾಗಕ್ಕೆ ತಲುಪಿದ್ದೆ. ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದ ನನಗೆ ಬಸ್ಸಲ್ಲಿದ್ದ ಜನರು ಏನು ಹೇಳುತ್ತಿದ್ದಾರೆ ಎಂದು ಕೇಳಿಸುತ್ತಲೇ ಇರಲಿಲ್ಲ. ಅಥ್ಲೆಟಿಕ್ಸ್ ಟ್ರ‍್ಯಾಕ್ ಎಂದು ಬಸ್ಸಿನ ಸಹಿ ಬೋರ್ಡ್‌ನಲ್ಲಿ ಬರೆದಿದ್ದನ್ನು ಮಾತ್ರವೇ ನೋಡಿದ್ದೆ. ಹಾಗಾಗಿ ಬೇರೇನೋ ಚಿಂತಿಸದೆ ನಾನು ಸುಮ್ಮನೆ ಹೊರಟುಬಿಟ್ಟೆ. ಈ ವೇಳೆ ನನ್ನ ಫೋನಿನಲ್ಲಿ ಸಂಗೀತ ಆಲಿಸುತ್ತಿದ್ದೆ. ಏನಾಗುತ್ತಿದೆ ಎಂದು ನನಗೆ ಅರಿವಾಗುವಷ್ಟರಲ್ಲಿ ಬಸ್ಸು ತಪ್ಪಾದ ದಾರಿಯಲ್ಲಿ ಹೋಗುತ್ತಿತ್ತು. ಈ ಜಾಗ ನನಗೆ ಪರಿಚಿತವೂ ಅಲ್ಲ” ಎಂದು ಖುದ್ದು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ ಪಾರ್ಚ್ಮೆಂಟ್.
“ಬಸ್ಸಿನಿಂದ ಇಳಿದ ಜಾಗದಲ್ಲಿ ರೋಯಿಂಗ್ ನಂಥ ಆಟ ನಡೆಯುತ್ತಿತ್ತು. ಮತ್ತೆ ಕ್ರೀಡಾ ಗ್ರಾಮಕ್ಕೆ ಬಂದು ಬೇರೊಂದು ಬಸ್ ಏರಿ ಅಥ್ಲೆಟಿಕ್ಸ್ ಕ್ರೀಡಾಂಗಣಕ್ಕೆ ಹೋಗಬೇಕೆಂದು ನನಗೆ ಹೇಳಲಾಯಿತು. ನಾನು ಹಾಗೆಯೇ ಮಾಡಿದ್ದರೆ ಸರಿಯಾದ ಸಮಯದಲ್ಲಿ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ.
ಟೋಕಿಯೋ 2020 ಕಾರೊಂದರಲ್ಲಿ ಸ್ಥಳ ತಲುಪಲು ನಾನು ನೋಡಿದೆ. ಆದರೆ ಈ ಮಂದಿ ಬಹಳ ಸ್ಟ್ರಿಕ್ಟ್. ಆಗ ನನ್ನ ನೆರವಿಗೆ ಬಂದ ಈ ಸ್ವಯಂ ಸೇವಕಿ ನನಗೆ ಸ್ವಲ್ಪ ದುಡ್ಡು ಕೊಟ್ಟು ಟ್ಯಾಕ್ಸಿ ಪಡೆಯಲು ನೆರವಾದಳು. ಹೀಗಾಗಿ ನನಗೆ ಕ್ರೀಡಾಂಗಣದಲ್ಲಿ ವಾರ್ಮ್-ಅಪ್ ಮಾಡಲು ಸಾಕಷ್ಟು ಕಾಲಾವಕಾಶ ಸಿಕ್ಕಿತು. ನಾನು ಈಗ ಆಕೆಯನ್ನು ಪತ್ತೆ ಮಾಡಿ ನನ್ನ ಚಿನ್ನದ ಪದಕ ತೋರಲು ಹೋಗಲಿದ್ದೇನೆ. ಏಕೆಂದರೆ ಆಕೆ ಸಹಾಯದಿಂದಲೇ ನನಗೆ ಚಿನ್ನದ ಪದಕ ಸಿಕ್ಕಿದೆ” ಎಂದು ಪಾರ್ಚ್ಮೆಂಟ್ ಹೇಳಿಕೊಂಡಿದ್ದರು. ಈಗ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಪಾರ್ಚ್ಮೆಂಟ್.
https://www.instagram.com/tv/CSRl4aqhYXP/?utm_source=ig_embed&ig_rid=548aafec-96d3-40f2-bd3a-b54833ee8e7b
https://www.instagram.com/p/CSZIUejpeW2/?utm_source=ig_embed&ig_rid=7134d008-703c-4b29-be60-8462579f8318