ಒಡಿಶಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 70 ವರ್ಷದ ವೃದ್ಧೆ ಬ್ಯಾಂಕ್ ನಿಂದ ಪಿಂಚಣಿ ಪಡೆಯಲು ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ ಪ್ರಕಾರ ದುರ್ಬಲ ಮಹಿಳೆ ಮುರಿದ ಕುರ್ಚಿಯ ಬೆಂಬಲದೊಂದಿಗೆ ಸುಡುವ ಬಿಸಿಲಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ಕಾಣಬಹುದು.
ಏಪ್ರಿಲ್ 17 ರಂದು (ಸೋಮವಾರ) ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಕ್ಷಣ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿ, ಬ್ಯಾಂಕ್ ನವರು ಪಿಂಚಣಿ ಪಡೆಯಲು ಬರುವವರ ಕಷ್ಟ ಅರಿತುಕೊಳ್ಳಬೇಕು ಮತ್ತು ಮಾನವೀಯವಾಗಿ ವರ್ತಿಸಬೇಕು ಎಂದು ಸೂಚಿಸಿದ್ದಾರೆ.
ನಂತರ, ಎಸ್‌ಬಿಐ ಅಧಿಕಾರಿಗಳು ನಿರ್ಮಲಾ ಸೀತಾರಾಮನ್ ಅವರ ಟ್ವೀಟ್‌ಗೆ ಉತ್ತರಿಸಿ, ಮುಂದಿನ ತಿಂಗಳಿನಿಂದ ಪಿಂಚಣಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.
ಸೂರ್ಯ ಹರಿಜನ ಎಂಬ ವೃದ್ಧೆ ತೀರಾ ಬಡವಳಾಗಿದ್ದು, ಆಕೆಯ ಹಿರಿಯ ಮಗ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ತನ್ನ ಕಿರಿಯ ಮಗನ ಕುಟುಂಬದೊಂದಿಗೆ ವೃದ್ಧೆ ಉಳಿದುಕೊಂಡಿದ್ದಾಳೆ. ಬೇರೆಯವರ ದನಗಳನ್ನು ಮೇಯಿಸುತ್ತಾ ಜೀವನ ಸಾಗಿಸುತ್ತಿದ್ದಾಳೆ. ಜಮೀನಿಲ್ಲದ ಈ ಕುಟುಂಬ ಗುಡಿಸಲಲ್ಲಿ ವಾಸಿಸುತ್ತಿದೆ.
ಮಹಿಳೆ ಪಿಂಚಣಿ ಪಡೆಯಲು ಬ್ಯಾಂಕ್ ಗೆ ಹೋಗಿದ್ದ ವೇಳೆ ಆಕೆಯ ಹೆಬ್ಬೆರಳು ದಾಖಲೆಗಳಿಗೆ ಹೊಂದಿಕೆಯಾಗುತ್ತಿಲ್ಲ. ಮನೆಗೆ ವಾಪಸ್ ಹೋಗಿ ಎಂದು ಹೇಳಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮ್ಯಾನೇಜರ್, ತನ್ನ ಕೈಬೆರಳು ಮುರಿದಿರುವುದರಿಂದ ಹಣವನ್ನು ಪಡೆಯಲು ವೃದ್ಧೆ ತೊಂದರೆ ಎದುರಿಸಿದ್ದು, ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್ ಕ್ರಮಕೈಗೊಂಡಿದೆ ಎಂದು ಹೇಳಿದ್ದಾರೆ.
ವೃದ್ಧೆಯ ಬೆರಳುಗಳು ಮುರಿದುಹೋಗಿವೆ, ಆದ್ದರಿಂದ ಅವಳು ಹಣವನ್ನು ಹಿಂಪಡೆಯಲು ತೊಂದರೆ ಎದುರಿಸುತ್ತಿದ್ದಾರೆ. ಆಕೆಗೆ ಬ್ಯಾಂಕ್ ನಿಂದ ಕೈಯಾರೆ 3,000 ರೂ ನೀಡಲಾಗಿದೆ. ನಾವು ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ಹೇಳಿದ್ದಾರೆ.