ಐಸಿಸಿ ವಿಶ್ವಕಪ್ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್‌ನ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಪಾಕಿಸ್ತಾನ, ತನ್ನ 12ನೇ ಯತ್ನದಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ವಿಶ್ವಕಪ್ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದೆ. ಇದೇ ವೇಳೆ, ಪ್ರಸಕ್ತ ಟೂರ್ನಿಯಲ್ಲಿ ಭಾರತದ ಸಲಹೆಗಾರರಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರ ಹಳೆಯ ಹೇಳಿಕೆಯೊಂದು ವೈರಲ್ ಆಗಿದೆ.
ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್‌ನಲ್ಲಿ ಗೆಲುವಿನ ಓಟವನ್ನು ಅದೆಷ್ಟು ದಿನ ಮುಂದುವರೆಸಲಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಿರುವ ಧೋನಿ, “ಇದು ವಾಸ್ತವ, ನಾವು ಎಂದಾದರೊಂದು ದಿನ ಸೋತೇ ಸೋಲುತ್ತೇವೆ. ದಾಖಲೆ ಹೀಗೇ ಇರುವುದಿಲ್ಲ. ಅದು ಇವತ್ತು ಆಗದಿದ್ದರೆ ಬಹುಶಃ 10 ವರ್ಷಗಳ ನಂತರ, 20 ವರ್ಷಗಳು, ಅಥವಾ 50 ವರ್ಷಗಳ ಬಳಿಕವಾದರೂ ಅಂಥ ಸಂದರ್ಭ ಬಂದೇ ಬರುತ್ತದೆ,” ಎಂದು ಹೇಳಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ಧೋನಿಯ ಈ ಪ್ರಬುದ್ಧ ಮಾತುಗಳು ಟಿ20 ವಿಶ್ವಕಪ್ ಪಂದ್ಯದ ಬಳಿಕ ಮತ್ತೊಮ್ಮೆ ವೈರಲ್ ಆಗಿದ್ದು, ನೆಟ್ಟಿಗರು ಕ್ಯಾಪ್ಟನ್ ಕೂಲ್ ರ ವಾಸ್ತವಿಕ ಮಾತುಗಳನ್ನು ಮೆಚ್ಚಿಕೊಂಡಿದ್ದಾರೆ.