ವಾಯಿದೆ ಮುಗಿದಿದ್ದರೂ ಮನೆಗೆ ಬಂದಿಲ್ಲವೇ ಡೆಬಿಟ್ ಕಾರ್ಡ್ ? SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ 12-08-2023 8:22AM IST / No Comments / Posted In: Latest News, India, Live News ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಡೆಬಿಟ್/ಎಟಿಎಂ ಕಾರ್ಡುಗಳನ್ನು ಅವುಗಳ ಅವಧಿ ಮುಗಿಯುತ್ತಲೇ ಹೊಸ ಕಾರ್ಡುಗಳನ್ನು ಅವರವರ ವಿಳಾಸಕ್ಕೆ ಕಳುಹಿಸಿಕೊಡುತ್ತವೆ. ಆದರೆ ಇಲ್ಲೊಬ್ಬ ಗ್ರಾಹಕರಿಗೆ ತಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದ್ದು, ಅವರ ವಿಳಾಸಕ್ಕೆ ಹೊಸ ಡೆಬಿಟ್ ಕಾರ್ಡ್ ಕಳುಹಿಸುವುದನ್ನು ಬಿಟ್ಟು ಬದಲಾಗಿ ಡೆಬಿಟ್ ಕಾರ್ಡ್‌ಗೆ ಹೊಸದಾಗಿ ಅರ್ಜಿ ಹಾಕಲು ಎಸ್‌ಬಿಐ ಆತನಿಗೆ ಕೋರಿದೆ. ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಈ ಗ್ರಾಹಕ, ಕಾರಣ ಕೋರಿ ಎಸ್‌ಬಿಐ ಅನ್ನು ಟ್ಯಾಗ್ ಮಾಡಿದ್ದಾರೆ. “ಡಿಯರ್ ಸರ್, ನಾನು ಕಳೆದ 10 ವರ್ಷಗಳಿಂದ ಎಸ್‌ಬಿಐನಲ್ಲಿ ಖಾತೆ ಹೊಂದಿದ್ದೇನೆ. ನನ್ನ ಡೆಬಿಟ್ ಕಾರ್ಡ್‌ನ ವಾಯಿದೆ ಇತ್ತೀಚೆಗೆ ಮುಗಿದಿದೆ. ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಡೆಬಿಟ್ ಕಾರ್ಡ್‌ಗಳನ್ನು ಗ್ರಾಹಕರ ಮನೆಗಳಿಗೆ ಕಳುಹಿಸುತ್ತವೆ. ಆದರೆ, ಸಕ್ರಿಯ ಖಾತೆ ಹೊಂದಿದ್ದರೂ ಸಹ, ನನಗೆ ಹೊಸದಾಗಿ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನನ್ನ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ,” ಎಂದು ಈ ಗ್ರಾಹಕ ಎಸ್‌ಬಿಐ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಸ್‌ಬಿಐ ನಿಯಮಗಳ ಅನುಸಾರ; ಆರ್ಥಿಕ ಒಳಗೊಳ್ಳುವಿಕೆಯ ಅಡಿ ಬಾರದ ಖಾತೆಯಾಗಿದ್ದಲ್ಲಿ, ಕಳೆದ 12 ತಿಂಗಳ ಅವಧಿಯಲ್ಲಿ ಒಮ್ಮೆಯಾದರು ಗ್ರಾಹಕರು ತಮ್ಮ ಕಾರ್ಡ್ ಬಳಸಿದ್ದಲ್ಲಿ, ಗ್ರಾಹಕರ ಪಾನ್ ಖಾತೆಗೆ ಲಿಂಕ್ ಆಗಿದ್ದಲ್ಲಿ ಮಾತ್ರವೇ ಹೀಗೆ ಡೆಬಿಟ್/ಕ್ರೆಡಿಟ್ ಕಾರ್ಡ್ ವಾಯಿದೆ ಮುಗಿದ ಕೂಡಲೇ ಬದಲಿ ಕಾರ್ಡ್ ಅನ್ನು ಗ್ರಾಹಕರ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುತ್ತದೆ ಎಂದು ಈ ಗ್ರಾಹಕರಿಗೆ ಮರು ಟ್ವೀಟ್ ಮಾಡುವ ಮೂಲಕ ತಿಳಿಸಲಾಗಿದೆ.