ಇಂಟರ್ನೆಟ್ ಎಲ್ಲಾ ರೀತಿಯ ವಿಡಿಯೋಗಳ ಭಂಡಾರವಾಗಿದೆ. ಕೆಲವು ನಿಮ್ಮನ್ನು ಖುಷಿಪಡಿಸಿದರೆ, ಇನ್ನೂ ಕೆಲವು ನಿಮ್ಮನ್ನು ತುಂಬಾ ಭಾವುಕರನ್ನಾಗಿಸುತ್ತದೆ. ಇತ್ತೀಚೆಗೆ, ಗುಡ್ ನ್ಯೂಸ್ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನೂ ಭಾವುಕರನ್ನಾಗಿಸಿದೆ. 6 ತಿಂಗಳ ನಂತರ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವ ಪತ್ನಿಗಾಗಿ ವ್ಯಕ್ತಿಯೊಬ್ಬರು ಹೊರಗೆ ಕುಳಿತಿರುವುದನ್ನು ವಿಡಿಯೋ ತೋರಿಸುತ್ತದೆ.
ಗುಡ್ ನ್ಯೂಸ್ ಮೂವ್‌ಮೆಂಟ್ ಈ ವಿಡಿಯೋವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ. ಆರು ತಿಂಗಳು ಆಸ್ಪತ್ರೆಯಲ್ಲಿದ್ದ ನಂತರ ಅವರ ಪತ್ನಿ ಅಂತಿಮವಾಗಿ ಮನೆಗೆ ಬರುತ್ತಿದ್ದಾರೆ ಎಂಬುದು ಪತಿಗೆ ತಿಳಿಯಿತು. ಹೀಗಾಗಿ ಅವರು ತುಂಬಾ ಉತ್ಸುಕರಾಗಿದ್ದು, ಆಕೆಯ ಬರುವಿಕೆಗಾಗಿ ಕಾಯುತ್ತಾ ಹೊರಗೆ ಕುಳಿತಿದ್ದಾರೆ ಎಂದು ಬರೆದಿದ್ದಾರೆ.
ವೃದ್ಧರೊಬ್ಬರು ತಮ್ಮ ಮನೆಯ ಹೊರಗೆ ಕುಳಿತಿರುವಲ್ಲಿಂದ ವಿಡಿಯೋ ಪ್ರಾರಂಭವಾಗುತ್ತದೆ. ಅವರು ರಸ್ತೆಯನ್ನೇ ಪದೇ ಪದೇ ನೋಡುತ್ತಲೇ ಇದ್ದು, ತನ್ನ ಪತ್ನಿಯನ್ನು ನೋಡುವುದಕ್ಕಾಗಿ ಚಡಪಡಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆಂಬ್ಯುಲೆನ್ಸ್ ಬಂದಾಗ ತನ್ನ ಪತ್ನಿ ಬಂದೇಬಿಟ್ಟಳು ಎಂದು ಲಗುಬಗೆಯಿಂದ ಮೇಲಕ್ಕೆದ್ದಿದ್ದಾರೆ. ಹೆಂಡತಿಯನ್ನು ಆಂಬ್ಯುಲೆನ್ಸ್‌ನಿಂದ ಹೊರತೆಗೆದು ಸ್ಟ್ರೆಚರ್ ಮೂಲಕ ಒಳಗೆ ಕರೆದೊಯ್ಯಲಾಗುತ್ತದೆ. ಮನೆ ಬಾಗಿಲಲ್ಲಿಯೇ ಪರಸ್ಪರ ಅವರು ಮಾತನಾಡಿಕೊಂಡಿದ್ದಾರೆ. ಬಳಿಕ ಮನೆಯ ಕೋಣೆಯೊಳಗೆ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ವೇಳೆ ವೃದ್ಧ ವ್ಯಕ್ತಿಯ ಕಣ್ಣೀರ ಹನಿಗಳು ಹರಿದಿವೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ವೃದ್ಧ ಪತಿ-ಪತ್ನಿಯ ಪ್ರೀತಿ, ವಾತ್ಸಲ್ಯ ಕಂಡು ನೆಟ್ಟಿಗರು ಮಮ್ಮುಲ ಮರುಗಿದ್ದಾರೆ.