ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗಿದೆ. ಎಷ್ಟು ಎಚ್ಚರಿಕೆಯಿಂದಿದ್ದರೂ ಜನರು ಮೋಸ ಹೋಗ್ತಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಈಗ ಸೈಬರ್ ಕ್ರೈಂ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಮ್ ಕಾರ್ಡ್ ಬ್ಲಾಕ್ ಹೆಸರಿನಲ್ಲಿ ವೃದ್ಧನೊಬ್ಬನ 6 ಲಕ್ಷದ 25 ಸಾವಿರ ರೂಪಾಯಿ ದೋಚಲಾಗಿದೆ.
ವೃದ್ಧನಿಗೆ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಟೆಲಿಕಾಂ ಕಂಪನಿ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಸಿಮ್ ಕಾರ್ಡ್ ಶೀಘ್ರದಲ್ಲೇ ಸ್ವಿಚ್ ಆಫ್ ಆಗಬಹುದು. ಸಿಮ್ ಕಾರ್ಡ್ ನಾಳೆ ಶಾಶ್ವತವಾಗಿ ಬಂದ್ ಆಗುವ ಸಾಧ್ಯತೆಯಿದೆ. ನೀವು 11 ರೂಪಾಯಿ ಪಾವತಿ ಮಾಡಿದಲ್ಲಿ ಸಿಮ್ ಮುಂದುವರೆಯಲಿದೆ ಎಂದಿದ್ದಾರೆ.
ನಾಳೆಯವರೆಗೆ ಅವಕಾಶವಿದೆಯಲ್ಲ ಎಂದು ವೃದ್ಧ ಹೇಳಿದ್ದಾನೆ. ಇದ್ರಿಂದ ಅಸಮಾಧಾನಗೊಂಡ ವ್ಯಕ್ತಿ, ನೀವು ಕಚೇರಿಗೆ ಹೋಗಬೇಕಾಗಿಲ್ಲ. ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿ ಮಾಡಿದ್ರೆ ಸಾಕು ಎಂದಿದ್ದಾನೆ. ಇದು ಸುಲಭವೆಂದು ಭಾವಿಸಿದ ವೃದ್ಧ, ಲಿಂಕ್ ಓಪನ್ ಮಾಡಿ, ಹಣ ಪಾವತಿ ಮಾಡಿದ್ದಾನೆ. ವೃದ್ಧ ಲಿಂಕ್ ಓಪನ್ ಮಾಡಿ, ಹಣ ಪಾವತಿ ಮಾಡ್ತಿದ್ದಂತೆ, ಖಾತೆಯಲ್ಲಿದ್ದ ಎಲ್ಲ ಹಣ ಖಾಲಿಯಾಗಿದೆ. ಆಗ ವೃದ್ಧನಿಗೆ ಸತ್ಯದ ಅರಿವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ.
ಬಿಎಸ್ಎನ್ಎಲ್, ಎರಡು ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ. ಆನ್ಲೈನ್ ವಂಚನೆ ಹೆಚ್ಚಾಗ್ತಿದೆ. ಆನ್ಲೈನ್ ಲಿಂಕ್ ಕಳುಹಿಸ ರಿಚಾರ್ಜ್ ಮಾಡುವಂತೆ ಹೇಳುವ ಕರೆಗಳಿಗೆ ಕಿವಿಗೊಡಬೇಡಿ ಎಂದಿದೆ. ಆಧಾರ್ ಕಾರ್ಡ್‌ನ ವಿವರಗಳನ್ನು ಕೇಳಿದರೆ ಅದನ್ನು ನೀಡಬೇಡಿ ಎಂದು ಬಿಎಸ್ಎನ್ಎಲ್ ಹೇಳಿದೆ.