ಹುಬ್ಬಳ್ಳಿ: ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಕ್ರಮ ವಿರೋಧಿಸಿ ವಿಪಕ್ಷ ಬಿಜೆಪಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದೆ. ಬಿಜೆಪಿ ಪ್ರತಿಭಟನೆಗೆ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ, ಅನಗತ್ಯವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲರ ಅವಧಿಯಲ್ಲೂ ಕೇಸ್ ಗಳನ್ನು ಹಿಂಪಡೆದ ಉದಾಹರಣೆಗಳಿವೆ ಎಂದಿದ್ದಾರೆ.
ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಳ್ಳು ಕೇಸ್ ಗಳಿದ್ದರೆ, ಉದ್ದೇಶ ಪೂರ್ವಕವಾಗಿ ಮೊಕದ್ದಮೆ ಹಾಕಿದ್ದರೆ, ಹೋರಾಟ ಮಡಿದಾಗ ಕೇಸ್ ಗಳನ್ನು ಹಾಕಿದ್ದರೆ ವಾಪಾಸ್ ಪಡೆಯಲು ಅವಕಾಶವಿದೆ. ಎಲ್ಲರ ಕಾಲದಲ್ಲಿಯೂ ಪ್ರಕರಣಗಳನ್ನು ವಾಪಾಸ್ ಪಡೆದ ಉದಾಹರಣೆಗಳಿವೆ. ಸುಳ್ಲು ಕೇಸ್ ಇದೆ ಎಂಬ ಕಾರಣಕ್ಕೆ ವಾಪಾಸ್ ಪಡೆಯಲಾಗಿದೆ ಎಂದರು.
ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೇಸ್ ವಾಪಾಸ್ ಪಡೆಯಲಾಗುವುದು. ನಮ್ಮ ಕ್ಯಾಬಿನೆಟ್ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ನ್ಯಾಯಾಲಯ ಒಪ್ಪಿದರೆ ಮಾತ್ರ ಕೇಸ್ ವಾಪಾಸ್ ಆಗುತ್ತದೆ ಎಂದು ಹೇಳಿದರು.