ಬೆಂಗಳೂರು: ಪ್ರಸಕ್ತ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆ ಘೋಷಣೆ ಮಾಡಿದೆ. ಆದರೆ, ಹಳೆ ವಿದ್ಯುತ್ ಬಿಲ್ ಸುಮಾರು 11 ಕೋಟಿ ರೂಪಾಯಿಗೆ ಬಾಕಿ ಪಾವತಿಸಲು ಎಸ್ಕಾಂಗಳು ಒತ್ತಡ ಹೇರುತ್ತಿದ್ದು, ಶಾಲಾ-ಕಾಲೇಜುಗಳಿಗೆ ವಿದ್ಯುತ್ ಕಡಿತದ ಆತಂಕ ಎದುರಾಗಿದೆ.
ರಾಜ್ಯದ ಸುಮಾರು 46 ಸಾವಿರ ಸರ್ಕಾರಿ ಶಾಲೆಗಳು 1,200ಕ್ಕೂ ಅಧಿಕ ಪದವಿ ಪೂರ್ವ ಕಾಲೇಜುಗಳಿಗೆ 2024ರ ಏಪ್ರಿಲ್ ನಿಂದ ಗೃಹಜ್ಯೋತಿ ಯೋಜನೆ ಮಾದರಿಯಲ್ಲಿ ಉಚಿತವಾಗಿದ್ದು, ಪೂರೈಕೆ ಯೋಜನೆ ಜಾರಿಗೆ ತರಲಾಗಿದೆ. ಇದರೊಂದಿಗೆ ಕುಡಿಯುವ ನೀರಿನ ಸೌಲಭ್ಯ ಉಚಿತವಾಗಿ ಕಲ್ಪಿಸಲು ಆದೇಶಿಸಲಾಗಿದೆ.
ಈ ಯೋಜನೆ ಜಾರಿಗೆ ಮೊದಲು ಶಾಲೆಗಳು ಮತ್ತು ಪಿಯು ಕಾಲೇಜುಗಳು ಬಳಸಿದ ವಿದ್ಯುತ್ ಶುಲ್ಕ 11.15 ಕೋಟಿ ರೂ. ಇದೆ. ಎಲ್ಲಾ ಎಸ್ಕಾಂಗಳಿಗೆ ಶಿಕ್ಷಣ ಇಲಾಖೆ ಇಷ್ಟೊಂದು ಮೊತ್ತವನ್ನು ಪಾವತಿಸಬೇಕಿದೆ. ಆದರೆ, ಬಿಲ್ ಪಾವತಿಗೆ ಯಾವುದೇ ಸೂಚನೆ ಅನುದಾನ ನೀಡಿಲ್ಲ.
ಇದರಿಂದ ಬಾಕಿ ಬಿಲ್ ಇರುವ ಶಾಲೆ, ಕಾಲೇಜುಗಳಿಗೆ ವಿದ್ಯುತ್ ಸಂಪರ್ಕ ಕಡಿತ ಆತಂಕ ಎದುರಾಗಿದೆ. ವಿದ್ಯುತ್ ಬಿಲ್ ಬಾಕಿ ಇರುವ ಶಾಲೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಸಿಬ್ಬಂದಿ ಹೇಳುತ್ತಿದ್ದಾರೆ. ವಿದ್ಯುತ್ ಕಡಿತವಾದಲ್ಲಿ ಶಾಲೆಗಳಲ್ಲಿ ಕಂಪ್ಯೂಟರ್ ತರಬೇತಿ, ನೀರು ಪೂರೈಕೆ, ಬಿಸಿ ಊಟ ಇತರೆ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎನ್ನುವ ಆತಂಕ ಎದುರಾಗಿದೆ.