ಬೆಂಗಳೂರು: ಈಗಾಗಲೇ 12ಡಿ ಅಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಏಪ್ರಿಲ್ 29, 30 ಮತ್ತು ಮೇ 1 ರಂದು ಮನೆ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಲಾಗುವುದು.
ಈಗಾಗಲೇ 12ಡಿ ಅಡಿ ಅರ್ಜಿ ಸಲ್ಲಿಸಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸುವರು. ಈ ಸಂದರ್ಭದಲ್ಲಿ ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು ರೂಟ್ ಮ್ಯಾಪ್ ಹಾಗೂ ನಿಗಿದಿತ ಸಮಯ ಹಾಗೂ ದಿನಾಂಕವನ್ನು ನೀಡುವರು. ಅ ಸಮಯದಲ್ಲಿ ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‍ನಲ್ಲಿ ಪಡೆಯಲಾಗುತ್ತದೆ.
ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ರೂಟ್ ಮ್ಯಾಪ್ ಪ್ರಕಾರ ಮಾಹಿತಿಯನ್ನು ನೀಡುತ್ತಾರೆ. ತಂಡದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ. ಪೋಸ್ಟಲ್ ಬ್ಯಾಲೆಟ್ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಏಜೆಂಟ್‍ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬಂಧ ತಮ್ಮ ಏಜೆಂಟ್‍ಗಳ ವಿವರವನ್ನು ಚುನಾವಣಾಧಿಕಾರಿಗಳಿಗೆ ಮೊದಲೇ ನೀಡಿರಬೇಕು. ಚುನಾವಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಏಜೆಂಟರು ಮಾತ್ರ ಬ್ಯಾಲೆಟ್ ಮತದಾನ ಪಡೆಯುವ ಸಂದರ್ಭದಲ್ಲಿ ಉಪಸ್ಥಿತರಿರಲು ಅವಕಾಶವಿರುತ್ತದೆ.
ಬ್ಯಾಲೆಟ್ ಮತದಾನದ ವೇಳೆ ಯಾವುದೇ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಇರಬಾರದು. ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಅಥವಾ ಹಾಸಿಗೆಯ ಮೇಲಿದ್ದು ಅಶಕ್ತರಾಗಿದ್ದರೆ, ಅಂತವರು 18 ವರ್ಷ ತುಂಬಿದ ಒಬ್ಬರನ್ನು ವೋಟಿಂಗ್ ಅಸಿಸ್ಟೆಂಟ್ ಅಂತಾ ನೇಮಿಸಿಕೊಳ್ಳಲು ಅವಕಾಶವಿದೆ. ಒಬ್ಬ ವೋಟಿಂಗ್ ಅಸಿಸ್ಟೆಂಟ್ ಒಬ್ಬರಿಗೆ ಮಾತ್ರ ಸಹಾಯಕರಾಗಿ ನೇಮಕವಾಗಬಹುದು.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಯಾವುದೇ ಲೋಪವಾಗದಂತೆ ಭಾರತ ಚುನಾವಣಾ ಆಯೋಗದ ನಿಯಮಾವಳಿಯಂತೆ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿಗಳು ಯಾವುದೇ ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳಬೇಕು. ಗಡಿಬಿಡಿ ಮಾಡಬಾರದು. ವಿಷಯವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕೆಂದು ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ.
ಈ ಮೂರು ದಿನಗಳಂದು 12ಡಿ ಅರ್ಜಿ ಸಲ್ಲಿಸಿರುವ ಮತದಾರರು ತಮ್ಮ ವಾಸಸ್ಥಳದಲ್ಲಿ ಹಾಜರಿದ್ದು, ತಮ್ಮ ಮನೆಗೆ ಬರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಹಕಾರ ನೀಡಬೇಕಿದೆ.