ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಕ್ಯಾಬ್ ಅಗ್ರಿಗೇಟರ್ ಓಲಾ ಹಾಗೂ ಉಬರ್ ದರ ಹೆಚ್ಚಳಕ್ಕೆ ಮುಂದಾಗಿದೆ. ಮುಂಬೈನಲ್ಲಿ ಶೇಕಡಾ 15ರಷ್ಟು ದರ ಏರಿಸುವುದಾಗಿ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು ಘೋಷಣೆ ಮಾಡಿವೆ.
ಇಂಧನ ಬೆಲೆಗಳ ಹೆಚ್ಚಳದಿಂದಾಗಿ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಎರಡೂ ಕಂಪನಿಗಳ ಅಧಿಕಾರಿಗಳು ಹೇಳಿದ್ದಾರೆ. ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಮುಂಬೈನಲ್ಲಿ ಇಂದು ಒಂದು ಲೀಟರ್ ಪೆಟ್ರೋಲ್ ಬೆಲೆ ಲೀಟರ್ ಗೆ 107.54 ರೂಪಾಯಿಯಾಗಿದೆ. ಡೀಸೆಲ್ ಪ್ರತಿ ಲೀಟರ್ ಗೆ 97.45 ರೂಪಾಯಿಯಾಗಿದೆ.
ಮುಂಬೈನಲ್ಲಿ ಈ ಎರಡೂ ಕಂಪನಿ ಚಾಲಕರು ಬಾಡಿಗೆ ಏರಿಕೆಗೆ ಕೋರಿ ಮಾರ್ಚ್ ನಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಈಗಿನ ದರಕ್ಕಿಂತ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳಕ್ಕೆ ಬೇಡಿಕೆಯಿಟ್ಟಿದ್ದರು. ಮೂಲ ಬೆಲೆಯನ್ನು 100 ರೂಪಾಯಿಗೆ ಏರಿಸುವಂತೆ ಕೋರಿದ್ದರು. ಸದ್ಯ ಅದು 30-35 ರೂಪಾಯಿಯಿದೆ. ನಂತ್ರ ಪ್ರತಿ ಕಿಲೋಮೀಟರ್ ಗೆ 25 ರೂಪಾಯಿ ಆಗಬೇಕೆಂದು ಕೋರಿದ್ದರು. ಇದು ಸದ್ಯ 6-7 ರೂಪಾಯಿಯಿದೆ.