
ದೇಶದಲ್ಲೇ ಸಂಚಲನ ಮೂಡಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಮಾರಾಟ ಆರಂಭವನ್ನು ಒಂದು ವಾರ ಮುಂದೂಡಿದೆ.
ಪರಿಷ್ಕೃತ ದಿನಾಂಕದ ಪ್ರಕಾರ ಸೆಪ್ಟೆಂಬರ್ 15ರಿಂದ ಮಾರಾಟ ಆರಂಭವಾಗಬಹುದು ಎಂದು ಹೇಳಲಾಗಿದೆ. ವೆಬ್ ಸೈಟ್‌ನಲ್ಲಿ ತಾಂತ್ರಿಕ ತೊಂದರೆಯೇ ಮಾರಾಟ ಆರಂಭವನ್ನು ಮುಂದೂಡಲು ಕಾರಣವಾಗಿದೆ.
ಕಳೆದ ತಿಂಗಳು ಕಂಪನಿಯು ಓಲಾ S1 ಮತ್ತು S1 ಪ್ರೊ ಎರಡು ಬಗೆಯ ವಿದ್ಯುತ್ ಸ್ಕೂಟರ್ ಗಳನ್ನು ಅನಾವರಣಗೊಳಿಸಿತ್ತು. ಇವುಗಳ ಬೆಲೆ ಕ್ರಮವಾಗಿ 99 ಸಾವಿರ ಮತ್ತು 1.29 ಲಕ್ಷ ರೂ. ಎಂದು ಘೋಷಿಸಲಾಗಿತ್ತು.
ಸೆಪ್ಟೆಂಬರ್ 8ರಿಂದ ಮಾರಾಟ ಪ್ರಕ್ರಿಯೆ ಆರಂಭ ಎಂದು ಕಂಪನಿ ಈ ಹಿಂದೆ ಹೇಳಿತ್ತು. ಆದರೆ ಒಲಾ ಕಂಪನಿಯ ಛೇರ್ಮನ್ ಮತ್ತು ಸಿಇಒ ಭವಿಶ್ ಅಗ್ರವಾಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮಾರಾಟವನ್ನು ಒಂದು ವಾರಕ್ಕೆ ಮುಂದೂಡಲಾಗಿದ್ದರ ಬಗ್ಗೆ ತಿಳಿಸಿದ್ದಾರೆ. ಇವರ ಪ್ರಕಾರ ಸೆಪ್ಟೆಂಬರ್ 15 ರಿಂದ ಮಾರಾಟ ಪ್ರಾರಂಭಿಸಲಿದ್ದಾರೆ. “ನಾವು ಈ ಹಿಂದೆ ಇವತ್ತಿನಿಂದ ಪ್ರಾರಂಭಿಸುತ್ತೇವೆ ಎಂದು ಹೇಳಿದ್ದೆವು. ಆದರೆ ತಾಂತ್ರಿಕ ಕಾರಣದಿಂದ ಮಾಡಲಾಗುತ್ತಿಲ್ಲ. ಈ ಮೂಲಕ ಕ್ಷಮೆಯಾಚಿಸುತ್ತಿದ್ದೇವೆ. ನಮ್ಮಿಂದ ನೀವುಗಳು ತುಂಬಾ ಕಾಯಬೇಕಾಗಿ ಬಂದಿದೆ. ವೆಬ್ ಸೈಟ್ ನಮಗೆ ಸಮಾಧಾನ ತಂದಿಲ್ಲ. ನಿಮಗೆ ನಿರಾಸೆ ತಂದಿದ್ದೇವೆ, ಅದಕ್ಕಾಗಿ ವಿಷಾದಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕಂಪನಿಯು ದಿಚಕ್ರ ವಾಹನ ವಹಿವಾಟು ಮತ್ತು ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಡಿಜಿಟಲೀಕರಣ ಮಾಡಬೇಕೆಂದಿತ್ತು. ಇದರಲ್ಲಿ ಲೋನ್ ಪಡೆಯುವುದನ್ನು ಕೂಡ ಡಿಜಿಟಲೀಕರಣ ಮಾಡುತ್ತಿರುವುದು ವಿಶೇಷವಾಗಿದೆ. ಗ್ರಾಹಕರಿಗೆ ಕಾಗದ ಪತ್ರಗಳು ಇಲ್ಲದೆ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
BIG NEWS: ಗಣೇಶೋತ್ಸವ ಆಚರಣೆಗೆ ಷರತ್ತು ಹಿನ್ನೆಲೆ; ಹಿಂದೂಪರ ಸಂಘಟನೆಗಳಿಂದ ತೀವ್ರಗೊಂಡ ಪ್ರತಿಭಟನೆ; ಬಿಬಿಎಂಪಿ ಕಚೇರಿಗೆ ಮುತ್ತಿಗೆ
“ನಾವು ಗ್ರಾಹಕರಿಗೆ ಮೊದಲು ಡಿಜಿಟಲ್ ಮಾರಾಟಕ್ಕೆ ಅನುವು ಮಾಡಿಕೊಡಬೇಕಿತ್ತು, ಆದರೆ ಇಂದು ಅದು ಸಾಧ್ಯವಾಗಿಲ್ಲ. ಆದರೆ ಒಂದು ವಾರದ ಬಳಿಕ, ಅಂದರೆ ಸೆಪ್ಟೆಂಬರ್ 15ರಂದು ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭಿಸುತ್ತೇವೆ ” ಎಂದು ಅಗರ್ವಾಲ್ ಹೇಳಿದ್ದಾರೆ.
ಜೊತೆಗೆ, ಈ ಹಿಂದೆ ಸ್ಕೂಟರನ್ನು ಬುಕ್ ಮಾಡಿದ್ದಲ್ಲಿ, ಅವರ ಆರ್ಡರ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವರ ಸರತಿಯಂತೆ ಗಾಡಿಯನ್ನು ನೀಡಲಾಗುವುದು ಎಂದು ಅಗ್ರವಾಲ್ ತಿಳಿಸಿದ್ದಾರೆ.
ಓಲಾ ಕಂಪನಿಯು ಜುಲೈ ತಿಂಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿದ್ದು, ಕೇವಲ ಒಂದೇ ದಿನದಲ್ಲಿ ಒಂದು ಲಕ್ಷ ಬೈಕ್ ಗೆ ಆರ್ಡರ್ ಬಂದಿತ್ತು. ಇದುವರೆಗೆ ಎಷ್ಟು ಆರ್ಡರ್ ಬಂದಿದೆ ಎಂದು ಕಂಪನಿಯು ತಿಳಿಸಿಲ್ಲ.