ಓಲಾ ಎಲೆಕ್ಟ್ರಿಕ್ ತನ್ನ ಉದ್ಯೋಗಿಗಳಿಗೆ ಶಾಕ್ ಕೊಡಲು ಮುಂದಾಗಿದೆ. ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೂ ಮೊದಲು ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಮುಂಬರುವ ವಾರಗಳಲ್ಲಿ ತನ್ನ ಸಂಸ್ಥೆಯಾದ್ಯಂತ ಸುಮಾರು 400-500 ಜನರನ್ನು ವಜಾಗೊಳಿಸಲು ಓಲಾ ಎಲೆಕ್ಟ್ರಿಕ್ ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಎಷ್ಟು ನೌಕರರನ್ನು ವಜಾಗೊಳಿಸಬೇಕೆಂಬ ನಿಖರ ಸಂಖ್ಯೆಯನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ. ಕಂಪನಿಯ ನಾಯಕತ್ವವು ಪ್ರಸ್ತುತ ಸಂಸ್ಥೆಯಾದ್ಯಂತ ನಿರೀಕ್ಷಿತ ವಜಾಗಳ ಪ್ರಮಾಣವನ್ನು ನಿರ್ಧರಿಸುತ್ತಿದೆ.
ವರದಿಯ ಮೂಲಗಳ ಪ್ರಕಾರ ವಜಾಗೊಳ್ಳುವ ಉದ್ಯೋಗಿಗಳನ್ನು ಮತ್ತೆ ಕಡಿಮೆ ಸಂಬಳಕ್ಕೆ ನೇಮಿಸಿಕೊಳ್ಳಬಹುದು. ಆದರೆ ಆ ರೀತಿಯ ಬದಲಾವಣೆಯಲ್ಲೂ ಉದ್ಯೋಗಿಗಳ ಸಂಖ್ಯೆ ಸದ್ಯಕ್ಕಿರುವ ಪ್ರಮಾಣಕ್ಕಿಂತ ಕಡಿಮೆಯಿರುತ್ತದೆ. ಈ ಬಗ್ಗೆ ತಿಳಿದಿರುವ ಉದ್ಯೋಗಿಯ ಪ್ರಕಾರ ಕೆಲವು ತಂಡಗಳು ಈಗಾಗಲೇ ಉದ್ಯೋಗಿಗಳ ಕಡಿತದ ಸಂಖ್ಯೆಯನ್ನು ಅಂತಿಮಗೊಳಿಸಿವೆ.
ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಎಲ್ಲಾ ಇಲಾಖೆಗಳಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಂಪನಿಯ ಹೇಳಿಕೆಯಂತೆ ಅಕ್ಟೋಬರ್ 2023 ರವರೆಗೆ ಓಲಾ ಎಲೆಕ್ಟ್ರಿಕ್ ಕಂಪನಿಯು 3733 ಉದ್ಯೋಗಿಗಳನ್ನು ಹೊಂದಿದೆ. ಏಪ್ರಿಲ್‌ನಲ್ಲಿ ಓಲಾ ಕ್ಯಾಬ್ಸ್ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಹೆಚ್ಚುವರಿಯಾಗಿ ಓಲಾ ಕ್ಯಾಬ್ಸ್ ನ ಸಿಇಒ ಹೇಮಂತ್ ಬಕ್ಷಿ ಮತ್ತು ಸಿಎಫ್‌ಒ ಕಾರ್ತಿಕ್ ಗುಪ್ತಾ ಕೂಡ ಕಂಪನಿಯನ್ನು ತೊರೆದರು.
ಸಂಸ್ಥೆಯು ತನ್ನ ಕ್ಯಾಬ್ ಮತ್ತು ಎಲೆಕ್ಟ್ರಿಕ್ ವಾಹನ ಘಟಕಗಳಲ್ಲಿ ಲಾಭದಾಯಕತೆಯನ್ನು ಗುರಿಯಾಗಿಸಿಕೊಂಡಿದೆ. ಆದರೂ ಆರ್ಥಿಕ ವರ್ಷ 24 ರ ಮೊದಲ ತ್ರೈಮಾಸಿಕದಲ್ಲಿ ಓಲಾ ಎಲೆಕ್ಟ್ರಿಕ್ 1,243 ಕೋಟಿ ರೂ.ಗಳ ಆದಾಯದ ಮೇಲೆ 267 ರೂ. ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಆರ್ಥಿಕ ವರ್ಷ 2023 ರಲ್ಲಿ, ಓಲಾ ಎಲೆಕ್ಟ್ರಿಕ್ 2,631 ಕೋಟಿ ರೂ.ಗಳ ನಿರ್ವಹಣಾ ಆದಾಯದ ಮೇಲೆ 1,472 ಕೋಟಿ ರೂ. ನಿವ್ವಳ ನಷ್ಟವನ್ನು ದಾಖಲಿಸಿದೆ.