ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಚಿತ್ತ ಹರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡ್ತಿದೆ. ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಎಲ್ಲರ ಗಮನ ಸೆಳೆದಿರುವ ಓಲಾ ಈಗ ಖುಷಿ ಸುದ್ದಿಯೊಂದನ್ನು ನೀಡಿದೆ.
ಓಲಾ ಕ್ಯಾಬ್ ನ ಸಂಸ್ಥಾಪಕ ಮತ್ತು ಓಲಾ ಎಲೆಕ್ಟ್ರಿಕ್ ನ ಸಿಇಒ ಭಾವೀಶ್ ಅಗರ್ವಾಲ್, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಗಸ್ಟ್ 15 ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಭಾವೀಶ್ ಅಗರ್ವಾಲ್, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಓಲಾ ಸ್ಕೂಟರ್ ಕಾಯ್ದಿರಿಸಿದ ಎಲ್ಲರಿಗೂ ಧನ್ಯವಾದಗಳು. ಆಗಸ್ಟ್ 15 ರಂದು ಓಲಾ ಸ್ಕೂಟರ್ ಬಿಡುಗಡೆ ಕಾರ್ಯಕ್ರಮವನ್ನು ಯೋಜಿಸುತ್ತಿದೆ. ಸ್ಕೂಟರ್ ಲಭ್ಯತೆಯ ದಿನಾಂಕವನ್ನು ಕೂಡ ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದಿದ್ದಾರೆ.
ಒಂದು ತಿಂಗಳ ಹಿಂದೆಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರುವಾಗಿತ್ತು. 24 ಗಂಟೆಗಳಲ್ಲಿ ಸ್ಕೂಟರ್‌ನ ಒಂದು ಲಕ್ಷ ಯೂನಿಟ್ ಬುಕ್ ಆಗಿತ್ತು. ಮೂರು ರೂಪಾಂತರದಲ್ಲಿ ಸ್ಕೂಟರ್ ಲಭ್ಯವಿರಲಿದೆ. ಒಂದು ಸ್ಕೂಟರ್ ಗರಿಷ್ಠ ಮಿತಿ 45 ಕಿಲೋಮೀಟರ್ ಆಗಿದ್ದರೆ ಮಧ್ಯಂತ ರೂಪಾಂತರದ ಗರಿಷ್ಠ ಮಿತಿ 70 ಕಿಲೋಮೀಟರ್ ಆಗಿರಲಿದೆ. ಟಾಪ್ ಎಂಡ್ ರೂಪಾಂತರದ ಗರಿಷ್ಠ ವೇಗ 95 ಕಿಲೋಮೀಟರ್ ಆಗಿರಲಿದೆ.