ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಇನ್ನು ಮುಂದೆಯೂ ಬೆಂಕಿ ಕಾಣಿಸಿಕೊಳ್ಳಬಹುದು. ಆದರೆ, ಅಗ್ನಿ ಅನಾಹುತಗಳು ಅಪರೂಪಕ್ಕೊಮ್ಮೆ ಸಂಭವಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಭವೀಶ್ ಅಗರ್ವಾಲ್ ತಿಳಿಸಿದ್ದಾರೆ.
ಓಲಾ ಕಂಪನಿಗೆ ಸೇರಿದ ಇ-ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮಟ್ಟದ ಚರ್ಚೆಗಳು ನಡೆದಿದ್ದವು ಮತ್ತು ಈ ಅಗ್ನಿ ಅನಾಹುತದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಆದೇಶವನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ಜಪಾನ್ ನ ಸಾಫ್ಟ್ ಬ್ಯಾಂಕ್ ಗ್ರೂಪ್ ಸಹಯೋಗದಲ್ಲಿ ಬಿಡುಗಡೆ ಮಾಡಿದ್ದ 1,400 ಕ್ಕೂ ಹೆಚ್ಚು ಇ-ಸ್ಕೂಟರ್ ಗಳನ್ನು ವಾಪಸ್ ಪಡೆದು ಬಾಹ್ಯ ಸಂಸ್ಥೆಯೊಂದರಿಂದ ತನಿಖೆಯನ್ನು ಕೈಗೊಂಡಿದೆ.
ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಶಾಲೆ ಮುಂದೂಡಿಕೆ, ಸಮವಸ್ತ್ರ ಕಡ್ಡಾಯ ಬೇಡ; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಗರ್ವಾಲ್, ಭವಿಷ್ಯದಲ್ಲಿಯೂ ಬೆಂಕಿ ಕಾಣಿಸಿಕೊಳ್ಳಬಹುದು ಎಂದು ನುಡಿದಿದ್ದಾರೆ. ಆದರೆ, ನಮ್ಮ ವಾಹನಗಳಲ್ಲಿ ಬೆಂಕಿ ಅನಾಹುತಕ್ಕೆ ಕಾರಣಗಳೇನೆಂಬುದನ್ನು ಪತ್ತೆ ಮಾಡಿ ಪ್ರತಿಯೊಂದಕ್ಕೂ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ನಾವು ತೋರುತ್ತಿದ್ದೇವೆ ಎಂದಿದ್ದಾರೆ.
ಕೆಲವೊಮ್ಮೆ ಸಣ್ಣಪುಟ್ಟ ದೋಷಗಳು ಕಂಡುಬರುವುದು ಸಾಮಾನ್ಯ. ಬ್ಯಾಟರಿ ಸೆಲ್ಸ್ ನಲ್ಲಿ ದೋಷ ಕಾಣಿಸಿಕೊಳ್ಳುವುದು ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ದೋಷಗಳು ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅನಾಹುತಕ್ಕೆ ಕಾರಣವಾಗಬಲ್ಲವು ಎಂದೂ ಅವರು ಹೇಳಿದ್ದಾರೆ.
ಈ ಮಧ್ಯೆ, ಇನ್ನೆರಡು ಪ್ರಮುಖ ಇ-ಸ್ಕೂಟರ್ ಕಂಪನಿಗಳಾದ ಒಕಿನಾವ ಮತ್ತು ಪ್ಯೂರ್ ಇವಿ ವಾಹನಗಳಲ್ಲಿಯೂ ಅಗ್ನಿ ಅನಾಹುತಗಳು ಸಂಭವಿಸಿರುವುದರ ಬಗ್ಗೆಯೂ ತನಿಖೆಗಳು ನಡೆಯುತ್ತಿವೆ.