ಎಲೆಕ್ಟ್ರಿಕ್ ಕಾರುಗಳನ್ನೂ ಬಿಡುಗಡೆ ಮಾಡಲಿದೆಯಾ ಓಲಾ….? 27-01-2022 11:37AM IST / No Comments / Posted In: Latest News, India, Live News ತನ್ನ ಎಸ್1 ಮತ್ತು ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಜಿಗಿದ ನಂತರ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ತನ್ನದೇ ಅಲೆಗಳನ್ನು ಸೃಷ್ಟಿಸಿದೆ. ಅದಾಗಲೇ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಾಟಿದ್ದಾಗಲೀ, ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯಲ್ಲಿ ವಿಳಂಬವಾಗಲಿ ಅಥವಾ ಒಂದೆರಡು ವಾರಗಳಲ್ಲಿ 4,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರವಾನಿಸಿದ್ದಾಗಲೀ, ಭಾರತೀಯ ಇವಿ ಕಂಪನಿಯು ಸುದ್ದಿಯಲ್ಲಿ ತೇಲಾಡುತ್ತಿದೆ. ಇದೀಗ ಮತ್ತೊಮ್ಮೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಓಲಾ. ಆದರೆ ಈ ಬಾರಿ ಹೊಸ ಕಾರಣಕ್ಕಾಗಿ. ಓಲಾ ಸಿಇಒ ಭವಿಶ್ ಅಗರ್ವಾಲ್ ಇತ್ತೀಚೆಗೆ ಓಲಾ ಎಲೆಕ್ಟ್ರಿಕ್ ಕಾರಿನ ಬಗ್ಗೆ ಸುಳಿವು ನೀಡಿದ್ದಾರೆ. ಓಲಾ ಎಲೆಕ್ಟ್ರಿಕ್ ಕಾರಿನ ಚಿತ್ರವನ್ನು ಹಂಚಿಕೊಳ್ಳಲು ಭವಿಶ್ ಟ್ವಿಟ್ಟರ್‌ನಲ್ಲಿ ಮುಂದಾಗಿದ್ದು, ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗುತ್ತಿದೆ ಎಂದು ಸೂಚಿಸುತ್ತದೆ. ಭವಿಷ್ಯದಲ್ಲಿ ಓಲಾ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಬಹುದೆಂದು ಸುಳಿವು ನೀಡಿರುವ ಭವಿಶ್ ಅವರ ಮತ್ತೊಂದು ಟ್ವೀಟ್‌ನ ಬೆನ್ನಿಗೇ ಈ ಟ್ವೀಟ್ ಬಂದಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಪ್ರವೇಶಿಸಲು ಓಲಾದ ನಿರ್ಧಾರದ ಮುಖಾಂತರ ದೇಶದ ಶುದ್ಧ ಮೊಬಿಲಿಟಿ ಕ್ಷೇತ್ರದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಬಗ್ಗೆ ಕಂಪನಿಯು ಹಿಂದೆ ಪ್ರಸ್ತಾಪಿಸಿದ್ದನ್ನು ನೋಡಿದಾಗ ಈ ಬೆಳವಣಿಗೆ ಅಚ್ಚರಿ ತಾರದು. ಓಲಾ ಸಿಇಒ, ಓಲಾದ ಬ್ರ್ಯಾಂಡೆಡ್ ಎಲೆಕ್ಟ್ರಿಕ್ ಕಾರಿನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆಯತ್ತ ಹೆಜ್ಜೆ ಇಡುತ್ತಿದೆ ಎಂದು ಈ ಟ್ವೀಟ್ ಸುಳಿವು ಕೊಟ್ಟಿದೆ. ಚಿತ್ರದಲ್ಲಿ ಕರ್ವಿ ಹ್ಯಾಚ್‌ಬ್ಯಾಕ್ ಕಾರೊಂದು ಇದ್ದು, ಗಾಜಿನ ಮೇಲ್ಛಾವಣಿಯನ್ನು ಅದರ ಮೂಗಿನಿಂದ ಹಿಂಭಾಗಕ್ಕೆ ವಿಸ್ತರಿಸಲಾಗಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರಿನ ಅಗಲ, ಹಿಂಭಾಗದ ಹಾಂಚ್‌ಗಳು ಮತ್ತು ದೊಡ್ಡ ಚಕ್ರಗಳ ಉದ್ದಕ್ಕೂ ಚಲಿಸುವ ಬೆಳಕಿನ ಪಟ್ಟಿಯನ್ನು ಹೊಂದಿದೆ. ಆದರೆ ಈ ಎಲ್ಲಾ ಪರಿಕಲ್ಪನೆಗಳು ಭವಿಶ್ ಹಂಚಿಕೊಂಡ ಚಿತ್ರದ ರೂಪದಲ್ಲಿ ಮಾತ್ರವೇ ನಮಗೆ ಕಾಣಸಿಕ್ಕಿದೆ. ನಿರ್ಮಾಣದ ಹಂತ ತಲುಪುವ ವೇಳಗೆ ಕಾರಿನ ವಿನ್ಯಾಸ ಹಾಗೂ ಸ್ಪೆಕ್‌ಗಳಲ್ಲಿ ಸಾಕಷ್ಟು ಮಾರ್ಪಾಡುಗಳು ಆಗುವ ಸಾಧ್ಯತೆ ಇದೆ. ಓಲಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಕ್ಷೇತ್ರ ಪ್ರವೇಶಿಸುವ ತನ್ನ ಯೋಜನೆಗಳ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ. ಆದರೆ ಈ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನು ನೆಡಲು ಓಲಾ ಸಿದ್ಧತೆ ನಡೆಸುತ್ತಿದೆ ಎಂಬ ಸೂಚನೆಗಳಂತೂ ಬಲವಾಗಿವೆ. Can you guys keep a secret? 🤫🤫 pic.twitter.com/8I9NMe2eLJ — Bhavish Aggarwal (@bhash) January 25, 2022