ಆನ್ಲೈನ್ ಕ್ಯಾಬ್ ಬುಕಿಂಗ್ ಕಂಪನಿ ಓಲಾಗೆ ಸಂಕಷ್ಟ ಎದುರಾಗಿದೆ. ಓಲಾ ಕಂಪನಿಯ ಸಿಇಓ ಹೇಮಂತ್ ಬಕ್ಷಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಲ್ಲೇ ಹೇಮಂತ್ ಬಕ್ಷಿ ಹುದ್ದೆ ತೊರೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಓಲಾ ಕಂಪನಿ ಶೇ.10 ರಷ್ಟು ಸಿಬ್ಬಂದಿಯನ್ನು ವಜಾ ಮಾಡಲು ಮುಂದಾಗಿದೆ.
ಓಲಾ ಕ್ಯಾಬ್ಸ್ ಸಿಇಓ ರಾಜೀನಾಮೆ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಹೇಮಂತ್ ಈ ವರ್ಷದ ಜನವರಿಯಲ್ಲಿ ಓಲಾಗೆ ಸೇರಿದ್ದರು. ಅವರ ದಿಢೀರ್ ರಾಜೀನಾಮೆಗೆ ಕಾರಣ ಬಹಿರಂಗವಾಗಿಲ್ಲ. ಓಲಾ ಹೊರತಾಗಿ ಹೊಸ ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಂಪನಿಯು ತನ್ನ IPO ಅನ್ನು ಪ್ರಾರಂಭಿಸಲು ಹೂಡಿಕೆ ಬ್ಯಾಂಕರ್ಗಳೊಂದಿಗೆ ಆರಂಭಿಕ ಚರ್ಚೆಯಲ್ಲಿರುವ ಸಮಯದಲ್ಲಿ ಈ ರಾಜೀನಾಮೆ ಆಘಾತ ತಂದಿದೆ.
ಅಷ್ಟೇ ಅಲ್ಲ ಕಂಪನಿಯಲ್ಲಿ ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆದಿದೆ. ಓಲಾದಲ್ಲಿ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ವಾಸ್ತವವಾಗಿ ಕಂಪನಿಯು ಪುನರ್ರಚನೆಯನ್ನು ಪರಿಗಣಿಸುತ್ತಿದೆ. ಇದರಿಂದಾಗಿ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ.
ಓಲಾ ಕ್ಯಾಬ್ಸ್ ಅನ್ನು 2010ರಲ್ಲಿ ಪ್ರಾರಂಭಿಸಲಾಯಿತು. ಶೀಘ್ರದಲ್ಲೇ ಅದು ಸಾಫ್ಟ್ಬ್ಯಾಂಕ್ ಮತ್ತು ಟೈಗರ್ ಗ್ಲೋಬಲ್ನಂತಹ ಪ್ರಮುಖ ಹೂಡಿಕೆದಾರರಿಂದ ಹಣ ಪಡೆಯಿತು. ಸದ್ಯ Uber, Rapido ನಂತಹ ಆನ್ಲೈನ್ ರೈಟ್ ಬುಕಿಂಗ್ ಅಪ್ಲಿಕೇಶನ್ಗಳಿಂದ ಕಂಪನಿ ಪೈಪೋಟಿ ಎದುರಿಸುತ್ತಿದೆ.