ಫ್ರೀಟೌನ್: ಸಿಯೆರಾ ಲಿಯೋನ್‌ನಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡಿದ್ದು, ಕನಿಷ್ಠ 92 ಮಂದಿ ಸಾವನ್ನಪ್ಪಿದ್ದಾರೆ. ಸಿಯೆರಾ ಲಿಯೋನ್ ನ ರಾಜಧಾನಿ ಬಳಿ ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು, ತೈಲ ಸಂಗ್ರಹಿಸಲು ಜನ ಮುಗಿಬಿದ್ದಿದ್ದಾರೆ. ಈ ವೇಳೆ ಟ್ಯಾಂಕರ್ ಸ್ಪೋಟಗೊಂಡು ಕನಿಷ್ಠ 92 ಮಂದಿ ಸಜೀವದಹನವಾಗಿದ್ದಾರೆ.
ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ನಂತರ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದೆ. 92 ಅಧಿಕ ಮಂದಿ ಸುಟ್ಟು ಕರಕಲಾಗಿದ್ದಾರೆ. ಕನ್ನಾಟ್ ಆಸ್ಪತ್ರೆಗೆ ಮೃತದೇಹಗಳನ್ನು ಸ್ಥಳಾಂತರ ಮಾಡಲಾಗಿದೆ. ತೀವ್ರ ಸುಟ್ಟಗಾಯಗಳಾಗಿರುವ 30 ಮಂದಿ ಬದುಕುಳಿಯುವ ಸ್ಥಿತಿಯಲ್ಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶನಿವಾರ ವಿಶ್ವಸಂಸ್ಥೆಯ ಹವಾಮಾನ ಮಾತುಕತೆಯಲ್ಲಿ ಭಾಗವಹಿಸಲು ಸ್ಕಾಟ್ಲೆಂಡ್‌ನಲ್ಲಿದ್ದ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ, ಇದೊಂದು ಭಯಾನಕ ಜೀವಹಾನಿ ಎಂದು ವಿಷಾದಿಸಿದ್ದಾರೆ.
ಉಪಾಧ್ಯಕ್ಷ ಮೊಹಮದ್ ಜುಲ್ಡೆಹ್ ಜಲ್ಲೋ ಅವರು ರಾತ್ರಿಯಿಡೀ ರಕ್ಷಣಾ ಕಾರ್ಯದ ನೇತೃತ್ವ ವಹಿಸಿ, ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಸಿಯೆರಾ ಲಿಯೋನ್‌ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಆರೋಗ್ಯ ಸೇರಿ ವಿವಿಧ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.