ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ ಸಿಕ್ಕಿದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿ ಲೀಟರ್ ಡೀಸೆಲ್ ಗೆ 3 ರೂ. ನಷ್ಟ ಅನುಭವಿಸುತ್ತಿವೆ. ಪೆಟ್ರೋಲ್ ಮೇಲಿನ ಲಾಭ ಕಡಿಮೆಯಾಗಿದೆ. ಹೀಗಾಗಿ ಇಂಧನ ಬೆಲೆ ಸದ್ಯಕ್ಕೆ ಇಳಿಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
2022ರ ಏಪ್ರಿಲ್ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾವಣೆ ಮಾಡಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕಚ್ಚಾತೈಲ ದರ ಭಾರಿ ಕಡಿಮೆಯಾದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಬಹುದು ಎನ್ನಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದಿಪ್ ಸಿಂಗ್ ಪುರಿ ಇತ್ತೀಚೆಗೆ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ನಿರ್ಧರಿಸುವುದಿಲ್ಲ. ಮಾರುಕಟ್ಟೆಯಲ್ಲಿ ಅಸ್ಥಿರತೆ ಇದೆ ಎಂದು ತೈಲ ಕಂಪನಿಗಳು ಹೇಳುತ್ತಿದ್ದು, ಇದನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದರು.
ಈಗ ಕಚ್ಚಾ ತೈಲ ದರ ಏರಿಕೆ ಹಾದಿಯಲ್ಲಿದೆ. ಬ್ರೆಂಟ್ ಕಚ್ಚಾತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 7ರಂದು ಬ್ಯಾರೆಲ್ 78.35 ಡಾಲರ್ ತಲುಪಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 2008ರ ಜುಲೈನಲ್ಲಿ ಕಚ್ಚಾ ತೈಲ ದರ 147.27 ಡಾಲರ್ ಗೆ ತಲುಪಿತ್ತು. ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ಇದರ ಅರ್ಧಕ್ಕೆ ಕಚ್ಚಾ ತೈಲದ ದರ ಇಳಿಕೆಯಾದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮೋದಿ ಸರ್ಕಾರ ಮನಸ್ಸು ಮಾಡಿಲ್ಲ. ಬದಲಿಗೆ ಅಬಕಾರಿ ಸುಂಕ ಹೆಚ್ಚಳ ಮಾಡಿಕೊಳ್ಳುವ ಮೂಲಕ ಮೋದಿ ಸರ್ಕಾರ ಆದಾಯ ವೃದ್ಧಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪ್ರಸ್ತುತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಚ್ಚಾತೈಲ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ.