
ಬಂಟ್ವಾಳ: ಕೋಳಿ ಮಾಂಸ ತಂದಿದ್ದ ಪ್ರಯಾಣಿಕನನ್ನು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಕೆಳಗಿಳಿಸಲು ಯತ್ನಿಸಿದ ಘಟನೆ ಇತ್ತೀಚೆಗಷ್ಟೇ ನಡೆದಿದ್ದು, ಇದು ಮಾಸುವ ಮೊದಲೇ ಮತ್ತೊಂದು ಘಟನೆ ನಡೆದಿದೆ.
ತೆಂಗಿನೆಣ್ಣೆ ಸಾಗಿಸುತ್ತಿದ್ದ ಮಹಿಳೆಯನ್ನು ಕಂಡಕ್ಟರ್ ಬಸ್ ನಿಂದ ಕೆಳಗಿಳಿಸಿದ ಘಟನೆ ಬಿಸಿ ರೋಡ್ ನಲ್ಲಿ ನಡೆದಿದೆ. ಸಾರಿಗೆ ಬಸ್ ನಲ್ಲಿ ಮಂಗಳೂರಿನಿಂದ ಹಾಸನಕ್ಕೆ ಮಹಿಳೆಯೊಬ್ಬರು ಗೋಣಿಚೀಲದಲ್ಲಿ ಮೂರು ಕ್ಯಾನ್ ತೆಂಗಿನೆಣ್ಣೆ ತೆಗೆದುಕೊಂಡು ಪ್ರಯಾಣಿಸಿದ್ದಾರೆ.
ಇದನ್ನು ಗಮನಿಸಿದ ಕಂಡಕ್ಟರ್ ಎಣ್ಣೆ ಪದಾರ್ಥಗಳನ್ನು ಬಸ್ ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಗಳ ಮಾಡಿ ಬಲವಂತದಿಂದ ಬಸ್ ನಿಂದ ಕೆಳಗೆ ಇಳಿಸಿದ್ದಾನೆ. ತೆಂಗಿನ ಎಣ್ಣೆ ಕ್ಯಾನ್ ಅಲ್ಲೇ ಬಿಟ್ಟು ಬಸ್ ನಿಂದ ಕೆಳಗಿಳಿದ ಮಹಿಳೆ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿದ್ದ ಸಂಚಾರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಚಾಲಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಅದೇ ಬಸ್ ನಲ್ಲಿ ಮಹಿಳೆ ತೆಂಗಿನೆಣ್ಣೆ ಸಮೇತ ಹಾಸನಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.