ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ.
ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು ಹತ್ತಲು ನಿರಾಕರಿಸಿದ್ದಾರೆ ಎಂದು ಇಬ್ಬರು ಅಫ್ಘಾನ್ ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ನಿಂದ ಉಂಟಾಗುವ ಪರಿಣಾಮಗಳ ಭಯದಿಂದ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು, ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ಹತ್ತಲು ಶುಕ್ರವಾರ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಜನ್ ಗಟ್ಟಲೆ ಮಹಿಳೆಯರಿಗೆ ಪುರುಷ ರಕ್ಷಕರಿಲ್ಲದ ಕಾರಣ ವಿಮಾನ ಹತ್ತಲು ಅವಕಾಶ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.
ಕಾಮ್ ಏರ್ ಮತ್ತು ಸರ್ಕಾರಿ ಸ್ವಾಮ್ಯದ ಅರಿಯಾನಾ ಏರ್ ಲೈನ್ ನಲ್ಲಿ ಇಸ್ಲಾಮಾಬಾದ್, ದುಬೈ ಮತ್ತು ಟರ್ಕಿಯ ವಿಮಾನಗಳಲ್ಲಿ ಮಹಿಳೆಯರಿಗೆ ಹತ್ತಲು ನಿರಾಕರಿಸಲಾಗಿದೆ. ತಾಲಿಬಾನ್ ನಾಯಕತ್ವದಿಂದ ಈ ಆದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
6 ನೇ ತರಗತಿ ಬಳಿಕ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದ ತಾಲಿಬಾನ್ ಈಗ ಏಕಾಂಗಿಯಾಗಿ ವಿಮಾನ ಹತ್ತುವಂತಿಲ್ಲ ಎಂದು ಮಹಿಳೆಯರಿಗೆ ನಿಷೇಧ ಹೇರಿದೆ.