ಬೆಂಗಳೂರು: ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಿನಿಸನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಇದೆ.
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಕೆ ಮಾಡುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದ್ದು, ವರದಿ ಆರೋಗ್ಯ ಇಲಾಖೆ ಕೈ ಸೇರಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್ –ಬಿ, ಗೋಬಿ ಮಂಚೂರಿಯನ್ ನಲ್ಲಿ ಸನ್ಸೆಟ್ ಯೆಲ್ಲೋ ಬಣ್ಣ ಮತ್ತು ಟಾರ್ಟ್ರಾಜಿನ್ ರಾಸಾಯನಿಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಸೋಮವಾರ ಈ ವರದಿ ಆಧರಿಸಿ ಆರೋಗ್ಯ ಸಚಿವರು ರಾಜ್ಯದಲ್ಲಿ ಗೋಬಿ ಮತ್ತು ಕಾಟನ್ ಕ್ಯಾಂಡಿ ನಿಷೇಧಿಸುವ ಬಗ್ಗೆ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ. ಗೋಬಿ ಮಂಚೂರಿಯನ್ ಮಾದರಿಯಲ್ಲಿಯೇ ಚಿಕನ್ ಕಬಾಬ್ ಸಿದ್ಧಪಡಿಸಲಿದ್ದು, ಕಬಾಬ್ ರುಚಿ ಹೆಚ್ಚಳ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಕೆಮಿಕಲ್ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಈ ಮಾದರಿಯ ಕಬಾಬ್ ಅನ್ನು ನಿಷೇಧಿಸಬೇಕೆಂದು ಆಹಾರ ತಜ್ಞರು ಮತ್ತು ವೈದ್ಯರು ಒತ್ತಾಯಿಸುತ್ತಿದ್ದಾರೆ.
ಗೋವಾದಲ್ಲಿಯೂ ಗೋಬಿ ಮಂಚೂರಿಯನ್ ನಿಷೇಧಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಯನ್ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಅಸುರಕ್ಷಿತ ಎಂದು ವರದಿಯಲ್ಲಿ ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ ನಿಷೇಧಿಸವ ಬಗ್ಗೆ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.