ಬೆಂಗಳೂರು: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಮಿಶ್ರಣ ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ವಿವಿಧ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ನೀಡಲಾಗಿತ್ತು. 100ಕ್ಕೂ ಹೆಚ್ಚು ಮಾದರಿಯ ಗೋಬಿ ಹಾನಿಕಾರಕ ಎಂದು ವರದಿ ಬಂದಿದ್ದು, ಈಗಾಗಲೇ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ.
ಹತ್ತಾರು ಮಾದರಿಯ ಕಾಟನ್ ಕ್ಯಾಂಡಿ ಅಸುರಕ್ಷಿತ ಎನ್ನುವುದು ಸಾಬೀತಾಗಿದೆ. ಆಹಾರ ಸುರಕ್ಷತೆ ಕಾಯ್ದೆಯಡಿ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಕೃತಕ ಬಣ್ಣ, ಹಾನಿಕಾರಕ ರಾಸಾಯನಿಕ ಬಳಕೆ ಕಾರಣ ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ ನಿಷೇಧ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ಗೋವಾದಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಿನಿಸನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್ –ಬಿ, ಗೋಬಿ ಮಂಚೂರಿಯನ್ ನಲ್ಲಿ ಸನ್ಸೆಟ್ ಯೆಲ್ಲೋ ಬಣ್ಣ ಮತ್ತು ಟಾರ್ಟ್ರಾಜಿನ್ ರಾಸಾಯನಿಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.