ಶಿವಮೊಗ್ಗ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಹಶೀಲ್ದಾರರು, ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಾಧಿಕಾರಿ ಮತ್ತು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದೆ.
ಶಿವಮೊಗ್ಗದಲ್ಲಿ ಹಿಂದೆ ತಹಶೀಲ್ದಾರ್ ಗಳಾಗಿದ್ದ ಮಂಜುನಾಥ್, ಕೊಟ್ರೇಶ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಮತ್ತು ಗ್ರಾಮ ಲೆಕ್ಕಿಗ ಸುರೇಶ್ ಹಾಗೂ ಬಸ್ ಚಾಲಕ ರಾಮಸ್ವಾಮಿ ಕೃಷ್ಣ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ತಾಲ್ಲೂಕು ಬಿ. ಬೀರನಹಳ್ಳಿ ತರಗನಹಳ್ಳಿಯ ರಾಮಸ್ವಾಮಿ ಕೆಎಸ್ಆರ್ಟಿಸಿ ಮೈಸೂರು ವಿಭಾಗದಲ್ಲಿ ಚಾಲಕನ ಹುದ್ದೆಗೆ ಸೇರಲು ಪರಿಶಿಷ್ಟ ಪಂಗಡದ ಬೇಡ ಜಾತಿಗೆ ಸೇರಿದವರು ಎಂದು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದು, ಅವರು ಮೂಲತಃ ಪ್ರವರ್ಗ-1ರ ಹಿಂದು ಹಾವಾಡಿಗ ಜಾತಿಗೆ ಸೇರಿದವರಾಗಿದ್ದಾರೆ ಎನ್ನುವುದು ಗೊತ್ತಾಗಿದೆ.
ಚಾಲಕನ ಹುದ್ದೆ ಕೆಲಸ ಗಿಟ್ಟಿಸಿಕೊಳ್ಳಲು ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದು, ಅವರ ಜಾತಿಯ ಸಿಂಧುತ್ವ ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ಅಧಿಕಾರಿಗಳು ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ್ದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸಮಗ್ರ ತನಿಖೆ ನಡೆಸಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಿದೆ.