ವಿಜಯಪುರ: ಮಕ್ಕಳ ಕಳ್ಳನೆಂದು ಭಾವಿಸಿ ಅಧಿಕಾರಿಯನ್ನು ಗ್ರಾಮಸ್ಥರು ಥಳಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರಿನಲ್ಲಿ ನಡೆದಿದೆ.
ಭೂಗರ್ಭ ಇಲಾಖೆ ಅಧಿಕಾರಿ ದಿನೋಮನ್ ಅವರನ್ನು ಗ್ರಾಮಸ್ಥರು ಥಳಿಸಿದ್ದಾರೆ. ಭೂಗರ್ಭ ಇಲಾಖೆಯ ಸಹಾಯಕ ಅಧಿಕಾರಿ ದಿನೋಮನ್ ಅವರು ಹಿರೇಬೇವನೂರು ಸುತ್ತಮುತ್ತ ಖನಿಜದ ಅದಿರು ಇರುವ ಬಗ್ಗೆ ಪರಿಶೀಲನೆಗೆ ಬೆಂಗಳೂರಿನಿಂದ ಬಂದಿದ್ದರು.
ಎಲ್ಲಿಂದ ಬಂದಿದ್ದೀರಿ ಎಂದು ಗ್ರಾಮಸ್ಥರು ಅಧಿಕಾರಿಯನ್ನು ಪ್ರಶ್ನಿಸಿ, ಐಡಿ ಮತ್ತು ಇಲಾಖೆಯ ಪತ್ರ ತೋರಿಸುವಂತೆ ಒತ್ತಾಯಿಸಿದ್ದಾರೆ. ಸಮರ್ಪಕ ಉತ್ತರ ನೀಡದ ಅಧಿಕಾರಿಯ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ವಿಷಯ ತಿಳಿದು ಇಂಡಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಸರ್ಕಾರಿ ಅಧಿಕಾರಿ ಎನ್ನುವುದು ಗೊತ್ತಾಗಿದೆ.
ಗೌಪ್ಯತೆಯ ದೃಷ್ಟಿಯಿಂದ ತಪ್ಪು ಮಾಹಿತಿ ನೀಡಿರುವುದಾಗಿ ಅಧಿಕಾರಿ ಪೊಲೀಸರಿಗೆ ತಿಳಿಸಿದ್ದಾರೆ. ಭೂಗರ್ಭ ಇಲಾಖೆ ಅಧಿಕಾರಿ ದಿನೋಮನ್ ಸರ್ಕಾರಿ ಅಧಿಕಾರಿ ಎಂದು ತಿಳಿದ ನಂತರ ಗ್ರಾಮಸ್ಥರು ಕ್ಷಮೆಯಾಚಿಸಿದ್ದಾರೆನ್ನಲಾಗಿದೆ.