ಬೆಂಗಳೂರು: ನಾಳೆಯಿಂದ ಸೆಪ್ಟಂಬರ್ 30ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ ಮಾಡಲಾಗಿದೆ. ಬೆಳಗ್ಗೆ 8 ಯಿಂದ ರಾತ್ರಿ 8 ಗಂಟೆಯವರೆಗೆ ಉಪ ನೋಂದಣಾಧಿಕಾರಿ ಕಚೇರಿ ಕೆಲಸದ ಅವಧಿ ವಿಸ್ತರಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿ ಕಾರ್ಯನಿರ್ವಹಣಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸೆಪ್ಟಂಬರ್ 23ರಂದು ನಾಲ್ಕನೇ ಶನಿವಾರ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿ ಕೆಲಸದ ಅವಧಿ ಸೆಪ್ಟೆಂಬರ್ 30ರವರೆಗೆ ಮಾತ್ರ ಅನ್ವಯವಾಗಲಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ.
ಅಕ್ಟೋಬರ್ 1ರಿಂದ ಮಾರ್ಗಸೂಚಿ ದರ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಜನ ಮುಗಿಬಿದ್ದ ಕಾರಣ ಕಾವೇರಿ- 2 ಸರ್ವರ್ ಕ್ರ್ಯಾಶ್ ಆಗಿ ತೊಂದರೆಯಾಗಿತ್ತು. ಅ. 1 ರಿಂದ ಮಾರುಕಟ್ಟೆ ದರಕ್ಕೆ ತಕ್ಕಂತೆ ಆಸ್ತಿ ಮಾರ್ಗಸೂಚಿ ದರ ಶೇಕಡ 25 ರಿಂದ 30ರಷ್ಟು ಹೆಚ್ಚಳವಾಗಲಿದೆ. ನೋಂದಣಿ ಶುಲ್ಕದಲ್ಲೂ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ಕ್ಕೆ ಮೊದಲೇ ಆಸ್ತಿ ನೋಂದಣಿಗೆ ಜನ ಮುಗಿಬಿದ್ದಿದ್ದಾರೆ. ಈ ಕಾರಣ ರಾಜ್ಯಾದ್ಯಂತ ಕಾವೇರಿ -2 ತಂತ್ರಾಂಶ ಕುಸಿತವಾಗಿದ್ದು, ಸರ್ವರ್ ಸಮಸ್ಯೆಯಿಂದ ನೋಂದಣಿಗೆ ತೊಂದರೆ ಆಗಿತ್ತು. ಹೀಗಾಗಿ ಕಚೇರಿ ಅವಧಿ ವಿಸ್ತರಿಸಲಾಗಿದೆ.