
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯದ ಸಮಯದಲ್ಲಿ ಅನುಸರಿಸಬೇಕಿರುವ ಸೂಚನೆಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸುತ್ತೋಲೆ ಹೊರಡಿಸಿದೆ.
ಕೆಲವರು ಕರ್ತವ್ಯದ ಅವಧಿಯಲ್ಲಿ ನಿಯಮ ಪಾಲಿಸದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರುವ ಮತ್ತು ಹೊರಡುವ ವೇಳೆ ಪಾಲಿಸಬೇಕು. ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಹಿರಿಯ ನಾಗರಿಕರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ತಿಳಿಸಲಾಗಿದೆ.
ನೌಕರರು, ಅಧಿಕಾರಿಗಳು ತಮಗೆ ನಿಗದಿಪಡಿಸಲಾದ ಕರ್ತವ್ಯ ಪೂರ್ಣವಾಗಿ ನಿರ್ವಹಿಸಬೇಕು. ಕೆಲಸದ ನಿಮಿತ್ತ ಕಚೇರಿಯಿಂದ ಹೊರಗೆ ತೆರಳಬೇಕಾದಲ್ಲಿ ಚಲನವಲನ ವಹಿಯಲ್ಲಿ ಸಕಾರಣ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.