ಉಡುಪಿ: ರಾಜ್ಯದ ಜನ ತಮ್ಮ ಕೆಲಸ ಕಾರ್ಯಗಳಿಗೆ ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಮನೆಬಾಗಿಲಿಗೆ ಸರ್ಕಾರವೇ ಬರಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಜನ ಕಚೇರಿಗೆ ಹೋಗುವ ಬದಲು ಮನೆಬಾಗಿಲಿಗೆ ಸರ್ಕಾರವೇ ಬರಬೇಕು ಎನ್ನುವ ನಿಟ್ಟಿನಲ್ಲಿ ಆಡಳಿತದಲ್ಲಿ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆ ಕೊಕ್ಕರ್ಣಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮತ್ತು ಗ್ರಾಮವಾಸ್ತವ್ಯ ಅಂಗವಾಗಿ ನಡೆದ ನಾನಾ ಇಲಾಖೆಗಳ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃದ್ಧರು, ವಿಕಲಚೇತನರು ಸರ್ಕಾರಿ ಕಚೇರಿಗೆ ಬಂದ ಸಂದರ್ಭದಲ್ಲಿ ಗಂಟೆಗಟ್ಟಲೆ ನಿಲ್ಲಿಸಬೇಡಿ. ಕೂಡಲೇ ಅವರ ಸಮಸ್ಯೆಗಳನ್ನು ಪರಿಹರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
60 ವರ್ಷ ಪೂರ್ಣಗೊಂಡವರಿಗೆ ಅರ್ಜಿ ಸಲ್ಲಿಸದೆ ಪಿಂಚಣಿ ಒದಗಿಸುವ ಕುರಿತಂತೆ ಕ್ರಮಕೈಗೊಳ್ಳಲಾಗಿದೆ. ಕಳೆದ ಆರು ತಿಂಗಳಲ್ಲಿ 35,000 ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಆಧಾರ್ ಜೋಡಣೆ ಮಾಡದ 4.90 ಲಕ್ಷ ಅಕ್ರಮ ಪ್ರಕರಣ ಪತ್ತೆ ಹಚ್ಚಿ ಸೌಲಭ್ಯ ರದ್ದುಪಡಿಸಲಾಗಿದ್ದು, ಸರ್ಕಾರದ ಖಜಾನೆಗೆ 400 ಕೋಟಿ ರೂಪಾಯಿ ಉಳಿತಾಯವಾಗಿದೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ಕೆಲಸ ಮಾಡಿಕೊಡಲು ಕ್ರಮಕೈಗೊಳ್ಳಲಾಗಿದೆ. ಕೃಷಿ ಭೂಮಿ ಪರಿವರ್ತನೆ ಮಾಡಲು ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.