ಜನರಿಗೆ ಹೊಸ ಕಂಟೆಂಟ್ ಕೊಡಬೇಕೆಂಬ ಹಂಬಲದಲ್ಲಿ ಯೂಟ್ಯೂಬರ್ಗಳು ಹೊಸ ಹೊಸ ಸಾಹಸ ಮಾಡುವುದುಂಟು. ಇಲ್ಲೊಬ್ಬ ಯೂಟ್ಯೂಬರ್ ವಿಡಿಯೋ ಮಾಡುವ ಉದ್ದೇಶದಿಂದ ಹಾವು, ಗೋಸುಂಬೆಗಳನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡು ಪೊಲೀಸರ ಬಲೆಗೆ ಬಿದ್ದಿದ್ದಾನೆ.
31 ವರ್ಷದ ಯೂಟ್ಯೂಬರ್ನನ್ನು ಸಂಬಲ್ಪುರ ಜಿಲ್ಲೆಯ ಕರಂಜುಲಾ ಗ್ರಾಮದಲ್ಲಿ ಒಡಿಶಾ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯನ್ನು ಪಶ್ಚಿಮ ಒಡಿಶಾ ಜಿಲ್ಲೆಯ ರೆಡಖೋಲೆ ಪ್ರದೇಶದ ರಾಮಚಂದ್ರ ರಾಣಾ ಎಂದು ಗುರುತಿಸಲಾಗಿದೆ.
ವೀಕ್ಷಕರನ್ನು ಆಕಷಿರ್ಸಲು ಆತ ಹಾವು, ಊಸರವಳ್ಳಿ ಮತ್ತು ಇತರ ಸರೀಸೃಪಗಳು ಮತ್ತು ಕಾಡು ಪ್ರಾಣಿಗಳ ವಿಡಿಯೋಗಳನ್ನು ಮಾಡುತ್ತಿದ್ದ. ಆತ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಣಾ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಮಳೆಗಾಲದಲ್ಲಿ ವಿವಿಧ ಸ್ಥಳಗಳಿಂದ ಪ್ರಾಣಿಗಳನ್ನು ಹಿಡಿದಿದ್ದೇನೆ ಎಂದು ಹೇಳಿದ್ದಾನೆ.
ಯೂಟ್ಯೂಬ್ ಚಾನೆಲ್ಗಾಗಿ ಕೆಲವು ವೀಡಿಯೊ ಮಾಡಿದ ನಂತರ ಪ್ರಾಣಿಗಳನ್ನು ಬಿಡುತ್ತಿದ್ದ ಎಂದು ಹೇಳಿಕೊಂಡಿದ್ದು, ತಾನು ಯಾವುದೇ ಕಾಡು ಪ್ರಾಣಿಗಳ ವ್ಯಾಪಾರದ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದಿದ್ದಾನೆ.
ಈತ ಪ್ರಾಣಿಗಳನ್ನು ಹಿಡಿಯುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಹಾವು, ಗೋಸುಂಬೆಗಳನ್ನು ರಕ್ಷಿಸಿ ಯುವಕನನ್ನು ಬಂಧಿಸಿದ್ದಾರೆ.
ನಾವು ಮೂರು ನಾಗರಹಾವುಗಳು ಮತ್ತು ನಾಲ್ಕು ಗೋಸುಂಬೆಗಳು ಸೇರಿದಂತೆ ಆರು ಹಾವುಗಳನ್ನು ರಕ್ಷಿಸಿದ್ದೇವೆ ಎಂದು ಜುಜುಮಾರಾದ ಸದರನ್ ರೇಂಜ್ (ಎಸಿಎಫ್) ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಮನು ಅಶೋಕ್ ಭಟ್ ಹೇಳಿದರು.
ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಎರಡೂ ಪ್ರಾಣಿಗಳನ್ನು ಮನೆಯಲ್ಲಿ ಇಡುವುದು ಅಥವಾ ಬೇಟೆಯಾಡುವುದು ಕಾನೂನುಬಾಹಿರವಾಗಿದೆ. ಈತ ವನ್ಯಜೀವಿ ವ್ಯಾಪಾರದ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಈತನ ಚಾನೆಲ್ ಐಟಿ ಕಾಯಿದೆ 2000 ಅನ್ನು ಉಲ್ಲಂಘಿಸುತ್ತದೆ. ಆದ್ದರಿಂದ, ಅರಣ್ಯ ಇಲಾಖೆ ಅಧಿಕಾರಿಗಳು ಯೂಟ್ಯೂಬ್ ಖಾತೆಯಲ್ಲಿನ ವಿಡಿಯೋ ಡಿಲೀಟ್ ಮಾಡಲು ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆಂದು ಮೂಲಗಳು ತಿಳಿಸಿವೆ.