ಫುಲ್ಬಾನಿ(ಒಡಿಶಾ): ಒಡಿಶಾದ ಕಂಧಮಾಲ್ ಜಿಲ್ಲೆಯ ಜಿ. ಉದಯಗಿರಿಯಲ್ಲಿರುವ ತನ್ನ ಅಧಿಕೃತ ಕ್ವಾರ್ಟರ್ಸ್ ನಲ್ಲಿ 26 ವರ್ಷದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ಸ್ವಾಗತಿಕಾ ಬೆಹೆರಾ ಅವರು ಖುರ್ದಾ ಜಿಲ್ಲೆಯ ನಿರಾಕರ್ ಪುರ ನಿವಾಸಿಯಾಗಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಜಿ ಉದಯಗಿರಿ ಪೊಲೀಸ್ ಠಾಣೆಗೆ ಅವರನ್ನು ನಿಯೋಜಿಸಲಾಗಿತ್ತು.
ಬೆಹೆರಾ ಅವರು ಎಸ್‌ಡಿಪಿಒ ಮತ್ತು ಐಐಸಿಯ ಕ್ವಾರ್ಟರ್ಸ್ ಬಳಿಯಿರುವ ತಮ್ಮ ವಸತಿ ಕ್ವಾರ್ಟರ್ಸ್ ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಕುತ್ತಿಗೆಗೆ ಸ್ಕಾರ್ಫ್ ನೊಂದಿಗೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಕಂಡುಬಂದಿದೆ. ಎಸ್‌ಡಿಪಿಒ ಡಿ. ತಿರುಪತಿ ರೈ ಮತ್ತು ಜಿ. ಉದಯಗಿರಿ ಐಐಸಿ ರೆಬಾಟಿ ಸಬರ್ ಅವರು ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಐ ಸಾವಿಗೆ ನಿಖರವಾದ ಕಾರಣವನ್ನು ತನಿಖೆಯ ನಂತರ ಕಂಡುಹಿಡಿಯಲಾಗುವುದು. ಕಳೆದ ಕೆಲವು ದಿನಗಳಿಂದ ಬೆಹೆರಾ ಖಿನ್ನತೆಗೆ ಒಳಗಾಗಿದ್ದರು ಎಂದು ರೆಬಾಟಿ ಸಬರ್ ಹೇಳಿದರು.
ಆದರೆ, ಮೃತಳ ಕುಟುಂಬಸ್ಥರು ಆಕೆಯ ಸಾವಿಗೆ ಪೊಲೀಸ್ ಠಾಣೆಯ ಐಐಸಿ ರೇಬಾಟಿ ಸಬರ್ ಹೊಣೆ ಎಂದು ಆರೋಪಿಸಿದ್ದು, ಅವರನ್ನು ಬಂಧಿಸುವಂತೆ ಒತ್ತಾಯಿಸಿ ಭಾನುವಾರವೂ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.
ಮೃತಳ ತಾಯಿ ಮತ್ತು ಸಹೋದರ ಶನಿವಾರ ರಾತ್ರಿ ಜಿ ಉದಯಗಿರಿ ಎಸ್‌ಡಿಪಿಒ ಅವರನ್ನು ಭೇಟಿ ಮಾಡಿ ಐಐಸಿ ಬೆಹೆರಾ ಅವರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ, ಸ್ವಾಗತಿಕಾ ದೂರವಾಣಿ ಕರೆಯಲ್ಲಿ ಒತ್ತಡವನ್ನು ತಡೆದುಕೊಳ್ಳಲಾಗದೆ ಕೆಲಸ ಬಿಡುವುದಾಗಿಯೂ ಹೇಳುತ್ತಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ.