ಭುವನೇಶ್ವರ: ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ ತೋರಿರುವ ಘಟನೆ ನಡೆದಿದ್ದು, ಇದೀಗ ಆಕೆಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್ 6 ರ ರಾತ್ರಿ ಒಡಿಶಾ ಭುವನೇಶ್ವರದ ಖಂಡಗಿರಿ ಪೊಲೀಸ್ ಠಾಣೆಯಲ್ಲಿ 34 ವರ್ಷದ ಮಹಿಳೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಗುರುವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಡಕಾನ ನಿವಾಸಿಯಾಗಿರುವ ಮಹಿಳೆ, ತನ್ನ ಸ್ನೇಹಿತ ನಾಪತ್ತೆಯಾಗಿದ್ದಾನೆಂದು ದೂರು ನೀಡಲು ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದ್ದು, ಆಕೆ ಅದಾಗಲೇ ಕಂಠಪೂರ್ತಿ ಮದ್ಯ ಸೇವಿಸಿದ್ದಳು.
ಮಹಿಳೆಯ ಆಕ್ರೋಶದ ವಿಡಿಯೋ ವೈರಲ್ ಆದ ನಂತರ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೀಡಿಯೊದಲ್ಲಿ, ಮಹಿಳೆ ಡೈರಿ ಚಾರ್ಜ್ ಅಧಿಕಾರಿ (ಡಿಸಿಒ) ಗೆ ಬಾಟಲಿಯನ್ನು ತೆರೆದು ನೀರು ಕೊಡುವಂತೆ ಕೇಳುತ್ತಿರುವುದನ್ನು ಕಾಣಬಹುದು.
ಪೊಲೀಸರ ಪ್ರಕಾರ, ಮಹಿಳೆ ಮತ್ತು ಆಕೆಯ ಸ್ನೇಹಿತ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಅಮಲೇರಿದ ಸ್ಥಿತಿಯಲ್ಲಿದ್ದ ಕಾರಣ ಆಕೆಯ ಸ್ನೇಹಿತ ಸ್ಕೂಟರ್ ಓಡಿಸದಂತೆ ಹೇಳಿದ್ದ ಎನ್ನಲಾಗಿದೆ. ಆದರೆ, ಆಕೆ ಒಪ್ಪದೆ ತಾನೇ ಸ್ಕೂಟರ್ ತೆಗೆದುಕೊಂಡಿದ್ದು, ಜಯದೇವ್ ವಿಹಾರ್ ಪ್ರದೇಶದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾಳೆ.
ಇದರಿಂದ ಅಸಮಾಧಾನಗೊಂಡ ಆಕೆಯ ಸ್ನೇಹಿತ ಅವಳನ್ನು ಸ್ಥಳದಲ್ಲೇ ಬಿಟ್ಟು ಬಾರಾಮುಂಡಾ ಪ್ರದೇಶದ ತನ್ನ ಮನೆಗೆ ತೆರಳಿದ್ದಾನೆ. ಮಹಿಳೆ ತನ್ನ ಸ್ನೇಹಿತನ ಮನೆಯನ್ನು ಹುಡುಕಲು ಸಾಧ್ಯವಾಗದಿದ್ದಾಗ, ಖಂಡಗಿರಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ನಂತರ ಖಂಡಗಿರಿ ಪೊಲೀಸರು ಆಕೆಯ ಸ್ನೇಹಿತನನ್ನು ಪತ್ತೆ ಹಚ್ಚಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸದೆ ಮನೆಗೆ ಕಳುಹಿಸಿದ್ದರು.
ಬುಧವಾರ ರಾತ್ರಿ ಕಮಿಷನರ್ ಎಸ್ ದೇವ್ ದತ್ತ ಸಿಂಗ್ ಅವರು ಖಂಡಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೆ ಘಟನೆ ಕುರಿತ ಮಾಹಿತಿ ತಿಳಿದುಬಂದಿದ್ದು, ಮಹಿಳೆಯ ವಿವರಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಹಿರಿಯ ಅಧಿಕಾರಿ ಸಿಂಗ್ ನಿರ್ದೇಶನದ ಮೇರೆಗೆ ಮಹಿಳೆ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.