
ಒಡಿಶಾದ ಬಾಲಸೋರ್ ಬಳಿ ಭೀಕರ ಅಪಘಾತಕ್ಕೀಡಾದ ರೈಲಿನಲ್ಲಿದ್ದ ಕರ್ನಾಟಕ ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ರೈಲ್ವೆ ಡಿಐಜಿ ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕುಮಾರ್, ಕರ್ನಾಟಕದಿಂದ ಹೊರಟಿದ್ದ ರೈಲಿಗೂ ಹಾನಿಯಾಗಿದೆ. 23 ಕೋಚ್‌ಗಳ ಪೈಕಿ ಮೂರು ಕೋಚ್ ಗಳಿಗೆ ಹಾನಿಯಾಗಿದೆ. ಸದ್ಯಕ್ಕೆ ಹಾನಿಗೊಳಗಾದ ಬೋಗಿಗಳಲ್ಲಿ ರಾಜ್ಯದ ಯಾವುದೇ ಪ್ರಯಾಣಿಕರು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಪಘಾತದ ನಂತರ ರೈಲ್ವೆ ಅಧಿಕಾರಿಗಳು ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ಕು ಸ್ಥಳಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಮತ್ತು ರಾಜ್ಯದ ಯಾವುದೇ ಪ್ರಯಾಣಿಕರು ಗಾಯಗೊಂಡಿರುವ ಅಥವಾ ಸತ್ತಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದರು.
ಘಟನೆಯಲ್ಲಿ ಕರ್ನಾಟಕದ ಜನರು ಪ್ರಯಾಣಿಸಿದ ಬೋಗಿಗಳಿಗೆ ಹಾನಿಯಾಗಿಲ್ಲ. ಡಿವೈಎಸ್ಪಿ ಮತ್ತು ಇತರರ ಶ್ರೇಣಿಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗುವುದು. ನಾವು ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ ಯಾವುದೇ ಕರೆಗಳು ಬಂದಿಲ್ಲ. ಇದುವರೆಗೆ ಕರ್ನಾಟಕದ ಪ್ರಯಾಣಿಕರ ಸಾವಿನ ಸುದ್ದಿ ಬಂದಿಲ್ಲ ಎಂದು ಅವರು ಹೇಳಿದರು.
ಶುಕ್ರವಾರ ಅಪಘಾತಕ್ಕೀಡಾದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು)-ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ 110 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ. ಅದೃಷ್ಟವಶಾತ್ ದುರಂತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಕರು ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವರಾಗಿದ್ದು, ಬೆಂಗಳೂರಿನಿಂದ ಎಸ್ 5, ಎಸ್ 6 ಮತ್ತು ಎಸ್ 7 ಬೋಗಿಗಳಲ್ಲಿ ಪ್ರಯಾಣಿಸಿದ್ದಾರೆ.