ಒಡಿಶಾದಲ್ಲಿ ಜರುಗಿದ ಭೀಕರ ರೈಲು ಅಪಘಾತದಲ್ಲಿ ಪ್ರತಿ ಸಂತ್ರಸ್ತರಿಗೂ ಪರಿಹಾರ ಸಿಗುತ್ತದೆ. ಟಿಕೆಟ್ ರಹಿತ ಪ್ರಯಾಣಿಕರೂ ಸಹ ಪರಿಹಾರ ಪಡೆಯುತ್ತಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಟಿಕೆಟ್ ರಹಿತ ಸಂತ್ರಸ್ತ ಪ್ರಯಾಣಿಕರಿಗೂ ಪರಿಹಾರ ನೀಡುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬ ರೋಗಿಯು ಸ್ಕೌಟ್ ಅಥವಾ ಮಾರ್ಗದರ್ಶಿಯನ್ನ ಹೊಂದಿದ್ದಾರೆ. ಇದರಿಂದಾಗಿ ಅವರು ಸಂತ್ರಸ್ತರ ಕುಟುಂಬಸ್ಥರನ್ನ ಶೀಘ್ರ ಪತ್ತೆಹಚ್ಚಿ ಗಾಯಾಳುವನ್ನ ಗುರ್ತಿಸಲು ಸಹಾಯವಾಗುತ್ತದೆ. ಸಹಾಯವಾಣಿ ಸಂಖ್ಯೆ 139 ಲಭ್ಯವಿದ್ದು, ಇದರಲ್ಲಿ ಹಿರಿಯ ರೈಲ್ವೇ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ ಮತ್ತು ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಗಾಯಗೊಂಡವರು ಅಥವಾ ಮೃತರ ಸಂಬಂಧಿಕರು ನಮಗೆ ಕರೆ ಮಾಡಬಹುದು. ಅವರ ಪ್ರಯಾಣ ಮತ್ತು ಇತರ ವೆಚ್ಚಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ರೈಲ್ವೆ ಸಚಿವರು ಘೋಷಿಸಿದ ಪರಿಹಾರವನ್ನು ತ್ವರಿತವಾಗಿ ವಿತರಿಸಲಾಗುತ್ತದೆ ಎಂದರು.
ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಸಣ್ಣ ಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಇಲ್ಲಿಯವರೆಗೆ ರೈಲ್ವೆಯು 285 ಪ್ರಕರಣಗಳಲ್ಲಿ 3.22 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ವಿತರಿಸಿದೆ. 11 ಸಾವು, 50 ಗಂಭೀರ ಗಾಯಗಳು ಮತ್ತು 224 ಸಣ್ಣಪುಟ್ಟ ಗಾಯಗೊಂಡ ಪ್ರಕರಣಗಳು ಇದರಲ್ಲಿದೆ. ಭಾರತೀಯ ರೈಲ್ವೆಯು ಏಳು ಸ್ಥಳಗಳಾದ ಸೋರೋ, ಖರಗ್‌ಪುರ, ಬಾಲಸೋರ್, ಖಾಂತಪಾರಾ, ಕಟಕ್ ಮತ್ತು ಭುವನೇಶ್ವರ ಭದ್ರಕ್‌ನಲ್ಲಿ ಪರಿಹಾರ ಮೊತ್ತವನ್ನು ಪಾವತಿಸುತ್ತಿದೆ. ಇನ್ನೂ ಸುಮಾರು 200 ಸಂತ್ರಸ್ತರನ್ನು ಗುರುತಿಸಬೇಕಾಗಿದೆ. ಆಗ್ನೇಯ ರೈಲ್ವೆಯು ಸಂತ್ರಸ್ತರ ಛಾಯಾಚಿತ್ರಗಳನ್ನು ಗುರುತಿಸಲು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ.