ಒಡಿಶಾದಲ್ಲಿ ಜರುಗಿದ ಭೀಕರ ರೈಲು ಅಪಘಾತ ಘಟನೆಯ 48 ಗಂಟೆಗಳ ನಂತರ ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದ ಸ್ಥಳದಿಂದ ಜೀವಂತವಾಗಿ ರಕ್ಷಿಸಲ್ಪಟ್ಟ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯ 35 ವರ್ಷದ ದಿನಗೂಲಿ ಕಾರ್ಮಿಕ ಶುಕ್ರವಾರ ತನ್ನ ಕುಟುಂಬದೊಂದಿಗೆ ಸೇರಿಕೊಂಡರು.
ಬದುಕುಳಿದ ದುಲಾಲ್ ಮಜುಂದಾರ್, 288 ಮಂದಿ ಸಾವನ್ನಪ್ಪಿ 1,200 ಕ್ಕೂ ಹೆಚ್ಚು ಜನರು ಗಾಯಗೊಂಡ ರೈಲು ದುರಂತ ಪ್ರಕರಣದ ಒಂದು ವಾರದ ನಂತರ ಭುವನೇಶ್ವರದ AIIMS ನಲ್ಲಿ ಅವರ ತಂದೆ ಸುಭಾಷ್ ಮಜುಂದಾರ್ ಅವರನ್ನು ಭೇಟಿಯಾದರು.
“ನನ್ನ ಮಗನನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ” ಎಂದು ದುಲಾಲ್ ತಂದೆ ಹೇಳಿದರು. ಉತ್ತರ ಬಾರ್ಬಿಲ್ ಗ್ರಾಮದ ನಿವಾಸಿ ದುಲಾಲ್ ಅವರನ್ನು ಸ್ಥಳೀಯ ಸೊರೊ ಪೊಲೀಸ್ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದ ಸುಮಾರು 48 ಗಂಟೆಗಳ ನಂತರ ಜೂನ್ 4 ರಂದು ಮಧ್ಯಾಹ್ನ ಕೋರಮಂಡಲ್ ಎಕ್ಸ್ ಪ್ರೆಸ್ನ ತಲೆಕೆಳಗಾದ ಕೋಚ್ನ ಪಕ್ಕದ ದಟ್ಟವಾದ ಪೊದೆಯಿಂದ ರಕ್ಷಣಾ ತಂಡವು ಅವರನ್ನು ಪತ್ತೆ ಮಾಡಿತು. ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್, ಯಶವಂತಪುರ-ಹೌರಾ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡ ಭೀಕರ ಅಪಘಾತದ ನಂತರ ಕೋರಮಂಡಲ್ ಎಕ್ಸ್ ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಮಜುಂದಾರ್ ಅವರು ಸಾಮಾನ್ಯ ಕಂಪಾರ್ಟ್ಮೆಂಟ್ನಿಂದ ಹೊರಗೆ ಬಿದ್ದರು.
ಅವರ ಅಳು ಕೇಳಿದ ಕೆಲವು ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಪೋಲೀಸ್ ತಂಡವು ಅವರನ್ನು ಸೊರೊದಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅದೇ ಸಂಜೆ ಅವರನ್ನು ಬಾಲಸೋರ್ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸಾಗಿಸಿತು. ಮರುದಿನ ಬೆಳಿಗ್ಗೆ ಅವರನ್ನು ಭುವನೇಶ್ವರದ AIIMS ಗೆ ದಾಖಲಿಸಲಾಯಿತು. ಆಘಾತಕಾರಿ ಮಿದುಳಿನ ಗಾಯದಿಂದ ಅವರು ನರಳುತ್ತಿದ್ದರು.
ಜೂನ್ 2ರ ಶುಕ್ರವಾರ ಸಂಜೆ ಅಪಘಾತ ನಡೆದರೂ ಮಂಗಳವಾರದವರೆಗೂ ದುಲಾಲ್ ಕುಟುಂಬಕ್ಕೆ ರೈಲು ಅಪಘಾತದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ದುಲಾಲ್ನ ಗಾಯಗಳ ಬಗ್ಗೆ ತಿಳಿಸಲು ಸ್ಥಳೀಯ ಪೊಲೀಸರು ಮಜುಂದಾರ್ ಕುಟುಂಬವನ್ನು ಸಂಪರ್ಕಿಸಿದಾಗ ದುರಂತದ ಬಗ್ಗೆ ಅವರಿಗೆ ತಿಳಿಯಿತು. ಬಳಿಕ ಕುಟುಂಬದ ಸ್ನೇಹಿತನೊಂದಿಗೆ ಸುಭಾಷ್ ಮಜುಂದಾರ್ ಭುವನೇಶ್ವರದ ಏಮ್ಸ್ ತಲುಪಿದರು.
ಶಸ್ತ್ರಚಿಕಿತ್ಸೆಯ ನಂತರ ದುಲಾಲ್ ಸುಧಾರಿಸಿದ್ದು ಈಗ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಈಗ ಅವರು ಮಾತನಾಡಲು ಸಾಧ್ಯವಾಗುತ್ತದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ.