ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೈಲು ಅಪಘಾತ ಸಂಭವಿಸಿದ 48 ಗಂಟೆಗಳ ನಂತರ ಕಾರ್ಯಾಚರಣೆ ಮುಕ್ತಾಯವಾಗಿದ್ದು ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿರುವ ವಸ್ತುಗಳು ಮನಸ್ಸನ್ನು ಕದಡಿವೆ.
ಪ್ರಯಾಣಿಕರ ಬ್ಯಾಗ್, ವಸ್ತುಗಳು, ಪುಸ್ತಕ, ಪ್ರೇಮವನ್ನು ವ್ಯಕ್ತಪಡಿಸುವ ಕವನಗಳು, ಆನೆಗಳು, ಮೀನುಗಳು ಮತ್ತು ಸೂರ್ಯನ ರೇಖಾಚಿತ್ರಗಳನ್ನು ಹೊಂದಿರುವ ಡೈರಿಯ ಹರಿದ ಪುಟಗಳು ಚೆಲ್ಲಾಪಿಲ್ಲಿಯಾಗಿದ್ದು ದುರಂತದ ನೋವಿನ ನಡುವೆ ಮನಸ್ಸನ್ನು ಅಲುಗಾಡಿಸಿವೆ.
“ಅಲ್ಪೋ ಆಲ್ಪೋ ಮೇಘ್ ಥೇಕೆ ಹಲ್ಕಾ ಬ್ರಿಸ್ತಿ ಹೋಯ್, ಚೋಟ್ಟೋ ಚೋಟ್ಟೋ ಗೋಲ್ಪೋ ಥೇಕೆ ಭಲೋಬಾಸಾ ಸೃಷ್ಟಿ ಹೋಯ್” (ಚದುರಿದ ಮೋಡಗಳು ಲಘು ಮಳೆಗೆ ಕಾರಣವಾಗುತ್ತವೆ, ನಾವು ಕೇಳುವ ಸಣ್ಣ ಕಥೆಗಳಿಂದ ಪ್ರೀತಿ ಅರಳುತ್ತದೆ)” ಎಂದು ಕೈಬರಹದ ಕವಿತೆ ಹೇಳಿದೆ.ಹರಿದುಹೋಗಿರುವ ಪುಸ್ತಕದ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇನ್ನೊಂದು ಪೇಜ್‌ನಲ್ಲಿದ್ದ ಅರ್ಧ ಮುಗಿದ ಕವಿತೆಯಲ್ಲಿ “ಭಾಲೋಬೇಷೇ ತೋಕೆ ಚಾಯ್ ಸರಖೋನ್, ಅಚಿಸ್ ತುಯಿ ಮೋನರ್ ಸಾಥೆ…” (ಪ್ರೀತಿಯಿಂದ ನನಗೆ ಎಲ್ಲಾ ಸಮಯದಲ್ಲೂ ನೀವು ಬೇಕು, ಎಲ್ಲಾ ಸಮಯದಲ್ಲೂ ನನ್ನ ಮನಸ್ಸಿನಲ್ಲಿ ನೀವು ಇದ್ದೀರಿ…) ಎಂದು ಕವಿತೆಯಲ್ಲಿದೆ. ಇದನ್ನು ನೋಡಿದ ನೆಟ್ಟಿಗರು “ ಹೃದಯ ವಿದ್ರಾವಕ”, “ಜೀವನವು ಅನಿರೀಕ್ಷಿತವಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ.
ಇಲ್ಲಿಯವರೆಗೂ ಕವಿತೆ ಅಥವಾ ಕವಿಯೊಂದಿಗಿನ ಸಂಬಂಧವನ್ನು ಹೇಳಿಕೊಳ್ಳಲು ಯಾರೂ ಮುಂದೆ ಬಂದಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.