ಬೆರ್ಹಾಂಪುರ: ಅಕ್ರಮ ಭ್ರೂಣಲಿಂಗ ಪತ್ತೆ ದಂಧೆಯನ್ನು ಬೆರ್ಹಾಂಪುರ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ಆಶಾ ಕಾರ್ಯಕರ್ತೆ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ.
ಗರ್ಭಿಣಿಯರ ಭ್ರೂಣವು ಗಂಡೋ ಅಥವಾ ಹೆಣ್ಣೋ ಎಂದು ನಿರ್ಧರಿಸಲು ವ್ಯವಸ್ಥಿತವಾಗಿ ದಂಧೆ ನಡೆಸಲಾಗುತ್ತಿತ್ತು. ಭ್ರೂಣವು ಹೆಣ್ಣು ಎಂದು ಗೊತ್ತಾದಾಗ ಗರ್ಭಪಾತಕ್ಕೆ ವ್ಯವಸ್ಥೆ ಮಾಡುತ್ತಿದ್ದ ಕೆಲವು ವರ್ಷಗಳಿಂದ ಈ ಕೇಂದ್ರವನ್ನು ನಡೆಸುತ್ತಿದ್ದರು ಎಂದು ಬರ್ಹಾಂಪುರ ಪೊಲೀಸ್ ಅಧೀಕ್ಷಕ ಶರವಣ ವಿವೇಕ್ ಎಂ. ಹೇಳಿದರು.
ದುರ್ಗಾ ಪ್ರಸಾದ್ ನಾಯಕ್, ಅಕ್ಷಯ ದಲೈ, ಹರಿ ಮೋಹನ ದಲೈ, ಆಶಾ ಕಾರ್ಯಕರ್ತೆ ರೀನಾ ಪ್ರಧಾನ್, ಶ್ರೀ ದುರ್ಗಾ ಪೆಥಾಲಜಿಯ ರವೀಂದ್ರನಾಥ ಸತ್ಪತಿ ಹಾಗೂ ವಿವಿಧ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಸೆಂಟರ್ ಗಳು, ಕ್ಲಿನಿಕ್ ಗಳ ಸಿಬ್ಬಂದಿಯನ್ನು ಕೂಡ ಬಂಧಿಸಲಾಗಿದೆ.
ಅಲ್ಟ್ರಾಸೌಂಡ್ ಪ್ರೋಬ್ ಗಳು, ಕನೆಕ್ಟರ್ ಗಳ ಜೊತೆಗೆ ಒಂದು ಲಾಜಿಕ್-ಇ ಮೇಕ್ ಅಲ್ಟ್ರಾಸೌಂಡ್ ಯಂತ್ರ, ಒಂದು ಲ್ಯಾಮಿನೇಟೆಡ್ ಲಾಜಿಕ್ ಬುಕ್ ಎಕ್ಸ್.ಪಿ. ಅಲ್ಟ್ರಾಸೌಂಡ್ ಯಂತ್ರ, ಅಲ್ಟ್ರಾಸೌಂಡ್‌ಗೆ ಬಳಸಿದ ಅಲ್ಟ್ರಾಸೌಂಡ್ ಟ್ರಾನ್ಸ್ ಮಿಷನ್ ಜೆಲ್, 18,200 ರೂಪಾಯಿ ಮೌಲ್ಯದ ನಗದು ಮತ್ತು ಒಂದು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲ್ಯಾಬ್ ಮಾಲೀಕರು, ಆಸ್ಪತ್ರೆ ಮಾಲೀಕರು ಮತ್ತು ಇತರರ ಶಾಮೀಲಾಗಿ 2005 ರಿಂದ ಭಾರತದಲ್ಲಿ ನಿಷೇಧಿಸಲಾದ ಪೋರ್ಟಬಲ್ ಅಲ್ಟ್ರಾಸೌಂಡ್ ಯಂತ್ರವನ್ನು ಬಳಸಿ ಈ ದಂಧೆ ನಡೆಸುತ್ತಿದ್ದರು ಎಂದು ಬರ್ಹಾಂಪುರ ಎಸ್ಪಿ ಶರವಣ ವಿವೇಕ್ ಎಂ. ತಿಳಿಸಿದ್ದಾರೆ.
ಅಂಕುಲಿಯ ಆನಂದ ನಗರದಲ್ಲಿ ಅಲ್ಟ್ರಾಸೌಂಡ್ ಯಂತ್ರವನ್ನು ಬಳಸಿ ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿಯ ಆಧರಿಸಿ ಬೆರ್ಹಾಂಪುರ ಪೊಲೀಸ್ ತಂಡವು ದುರ್ಗಾ ಪ್ರಸಾದ್ ನಾಯಕ್ ನಡೆಸುತ್ತಿದ್ದ ಮನೆ-ಕಮ್ ಕ್ಲಿನಿಕ್ ಮೇಲೆ ದಾಳಿ ನಡೆಸಿತ್ತು.
ದಾಳಿ ವೇಳೆ ಆರೋಪಿ ಲಿಂಗ ಪತ್ತೆ ನಡೆಸುತ್ತಿದ್ದು, ಮನೆಯ ಮೊದಲ ಮಹಡಿಯಲ್ಲಿ 11 ಗರ್ಭಿಣಿಯರು ಇದ್ದರು. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.