ಪುರಿ: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಮುಂಭಾಗದ ಐತಿಹಾಸಿಕ ಎಮರ್ ಮಠದ ಬಳಿ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ಯಾತ್ರಿ ಪಟ್ಟಣದ ಹರಚಂಡಿ ತಾಲುಚಾ ಸಾಹಿಯ ದೇವಸ್ಥಾನದ ಅರ್ಚಕರ ಮಗ ಶಿವರಾಮ ಪಾತ್ರ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪುರಿ ಜಗನ್ನಾಥ ದೇವಾಲಯದ ಮುಖ್ಯ ದ್ವಾರದಿಂದ ಕೇವಲ 20 ಮೀಟರ್ ದೂರದಲ್ಲಿ ಶಿವರಾಮ ಪಾತ್ರನನ್ನು ತಡೆದು, ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹೊರಟು ಹೋದರು.
ದೇವಸ್ಥಾನದ ಮುಖ್ಯದ್ವಾರದಲ್ಲಿದ್ದ ಪೊಲೀಸರು ತತ್‌ಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಗಾಯಾಳುವನ್ನು ಪುರಿ ಜಿಲ್ಲಾಸ್ಪತ್ರೆ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ, ಗಾಯಾಳು ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪುರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕನ್ವರ್ ವಿಶಾಲ್ ಸಿಂಗ್ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.
ಈ ದಾಳಿ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ ಆಯುಧಗಳನ್ನು ವಶಪಡಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೇಮ ಪ್ರಕರಣದ ವೈಯಕ್ತಿಕ ದ್ವೇಷದ ಕಾರಣ ಕೊಲೆ ನಡೆದಿದೆ. ತನಿಖೆ ನಡೆಯುತ್ತಿದೆ ಎಂದು ಪುರಿ ಎಸ್ಪಿ ಸಿಂಗ್ ಹೇಳಿದ್ದಾರೆ.