ಒಡಿಶಾ ಪೊಲೀಸ್ ವಿಜಿಲೆನ್ಸ್ ವಿಭಾಗ ಶುಕ್ರವಾರ ರಾಜ್ಯದ ವಿವಿಧ ಸ್ಥಳಗಳಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿದಾಗ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಬರಂಗಪುರ ಜಿಲ್ಲೆಯ ಹೆಚ್ಚುವರಿ ಉಪ-ಕಲೆಕ್ಟರ್ ಆಗಿ ನಿಯೋಜನೆಗೊಂಡ ಒಡಿಶಾ ಆಡಳಿತ ಅಧಿಕಾರಿ(ಒಎಎಸ್) ಪ್ರಶಾಂತ ಕುಮಾರ್ ರೌತ್ ಅವರ ಬಳಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಭುವನೇಶ್ವರ್, ನಬರಂಗ್ ಪುರ ಮತ್ತು ಇತರ ಸ್ಥಳಗಳಲ್ಲಿನ ಅವರ ನಿವಾಸಗಳ ಮೇಲೆ ನಡೆದ ದಾಳಿ ನಡೆಸಲಾಗಿದೆ.
ಕಾನನ್ ವಿಹಾರ್ ನಲ್ಲಿರುವ ತಮ್ಮ ನೆರೆಹೊರೆಯವರ ಟೆರೇಸ್ ಗೆ ಆರೋಪಿ ಅಧಿಕಾರಿಯ ಪತ್ನಿ ನಗದು ಇದ್ದ 6 ರಟ್ಟಿನ ಪೆಟ್ಟಿಗೆಗಳನ್ನು ಎಸೆದಿದ್ದಾರೆ. ವಿಂಗ್ ನ ಸಿಬ್ಬಂದಿ ಅಲ್ಲಿಗೆ ಬಂದಾಗ ಹಣ ಮರೆಮಾಡಲು ಹೀಗೆ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ನೆರೆಹೊರೆಯವರ ಮನೆಯಿಂದ ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಯಿತು. ಹಣ ಎಣಿಸಲು ಅನೇಕ ಎಣಿಕೆ ಯಂತ್ರಗಳನ್ನು ಬಳಸಲಾಯಿತು ಎಂದು ಹೇಳಿದ್ದಾರೆ.
ರೌತ್ ಅವರ ನಬರಂಗಪುರ ನಿವಾಸದಿಂದ ಇನ್ನೂ 89.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಯಿಂದ ವಶಪಡಿಸಿಕೊಂಡ ನಗದು ಪ್ರಮಾಣದಲ್ಲಿ ಇದು ಎರಡನೇ ಅತಿದೊಡ್ಡ ವಸೂಲಿಯಾಗಿದೆ. ಏಪ್ರಿಲ್ 2022 ರಲ್ಲಿ, ಗಂಜಾಂನ ಸಣ್ಣ ನೀರಾವರಿ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡ ಕಾರ್ತಿಕೇಶ್ವರ್ ರೌಲ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿದಾಗ ನಾವು 3.41 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.