ಒಡಿಶಾ ಶಾಸಕ ವಿಜಯ್ ಶಂಕರ್ ದಾಸ್ ತಮ್ಮದೇ ವಿವಾಹಕ್ಕೆ ಗೈರಾದ ಕಾರಣಕ್ಕೆ ಅವರ ಮೇಲೆ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಜಗತ್‌ಸಿಂಗ್‌ಪುರದ ತಿರ್ಟೋಲ್‌ನ ಶಾಸಕ ವಿಜಯ್ ಶಂಕರ್ ದಾಸ್ ಮತ್ತು ಸೋಮಲಿಕಾ ದಾಸ್ ಸಾರ್ವಜನಿಕವಾಗಿ ವಿವಾಹ ಮಾಡಿಕೊಳ್ಳುವುದು ಹಾಗೂ ಜೂನ್ 17 ರಂದು ವಿವಾಹ ನೋಂದಣಿಗಾಗಿ ದಿನಾಂಕ ನಿಗದಿಪಡಿಸಿದ್ದರು. ಆದರೆ ನಿಗದಿತ ದಿನದಂದು ಜಗತ್‌ಸಿಂಗ್‌ಪುರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಲು ಶಾಸಕರು ವಿಫಲರಾದರು.
ಸೋಮಲಿಕಾ ಸಮಯಕ್ಕೆ ಸರಿಯಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದರೆ ಶಾಸಕರಾಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ಅಲ್ಲಿಗೆ ಬರಲಿಲ್ಲ. ಸುಮಾರು ಮೂರು ತಾಸು ಕಾದ ನಂತರ, ಆಕೆ ಹೊರಟು ನಿಂತರು. ಮರುದಿನವೇ ಸೋಮಲಿಕಾ ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮತ್ತು ಅವರ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.
ಸೋಮಲಿಕಾ ದೂರಿನಲ್ಲಿ ವಂಚನೆ ಮತ್ತು ಕಿರುಕುಳದ ಆರೋಪವನ್ನೂ ಮಾಡಿದ್ದಾರೆ. ತನಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ ಮತ್ತು ತನ್ನ ಫೋನ್ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೇ 17 ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದೇವೆ. ಅವರು ಅಲ್ಲಿಗೆ ಬರುವುದಾಗಿ ನನಗೆ ಭರವಸೆ ನೀಡಿದ್ದರು. ಆದರೆ, ಅವರು ಭರವಸೆ ಈಡೇರಿಸಿಲ್ಲ ಎಂದು ಹೇಳಿದ್ದಾರೆ. ಸಂಬಂಧಿಕರು ತನಗೆ ಮತ್ತು ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಹ ಆರೋಪಿಸಿದ್ದಾರೆ. ಆದರೆ, ಶಾಸಕರು ಆರೋಪವನ್ನು ತಳ್ಳಿಹಾಕಿದ್ದಾರೆ.
ನಿಯಮಗಳ ಪ್ರಕಾರ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮದುವೆ ನೋಂದಣಿಗೆ ಇನ್ನೂ 60 ದಿನ ಬಾಕಿ ಇದೆ. ಇಂದು ಮದುವೆಯ ನೋಂದಣಿಗೆ ಸಂಬಂಧಿಸಿದಂತೆ ನಾನು ಯಾರಿಂದಲೂ ಯಾವುದೇ ಮಾಹಿತಿಯನ್ನು ಸ್ವೀಕರಿಸಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಗೆ ದೂರವಾಣಿ ಕರೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.